ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಏರಿಕೆ (Bus Price Hike) ಮಾಡಿತ್ತು. ಇದರ ಬೆನ್ನಲ್ಲೇ ಈಗ ಮೆಟ್ರೋ ದರ(Metro Price Hike) ಕೂಡ ಏರಿಕೆಯಾಗಿದ್ದು, ಜನರು ಕಂಗಾಲಾಗಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ.
ಮೆಟ್ರೋ ದರ ಏರಿಕೆ ಖಂಡಿಸಿ ಬಿಜೆಪಿ (BJP) ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಕಾಂಗ್ರೆಸ್ (Congress) ಪಕ್ಷದಿಂದಲೂ ಪ್ರತಿಭಟನೆ ನಡೆದಿದೆ. ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಶಿಫಾರಸ್ಸಿನಂತೆ ಮೋದಿ ಸರ್ಕಾರ ಅವೈಜ್ಞಾನಿಕವಾಗಿ ಮೆಟ್ರೋ ದರ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ, ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ಮೆಟ್ರೋ ನಿಲ್ದಾಣದ ಒಳಗೆ ನುಗ್ಗಲು ಕಾಯಕರ್ತರು ಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಹಲವರು ಮೆಟ್ರೋ ಟಿಕೆಟ್ ಪಡೆದು ಒಳಗೆ ನುಗ್ಗಿ ಪ್ರತಿಭಟನೆ ನಡೆಸಿದರು.