ದಾವಣಗೆರೆ: ಬಡವರ ಪಾಲಿಗೆ ಕಾಂಗ್ರೆಸ್ ಪಕ್ಷ ಒಂದು ಗಿರವಿ ಅಂಗಡಿಯಂತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮೆಟ್ಟಿಲು ಹತ್ತಿದ ಬಡವರ ಜೀವ ಸಮಾಧಿಯಾಗುತ್ತದೆ. ಯಾರೂ ವಾಪಸ್ ಬರುವುದಿಲ್ಲ. ಶ್ರೀಮಂತರು ಈ ಬಡವರು ಇಟ್ಟ ಗಿರವಿ ವಸ್ತುಗಳನ್ನು ಹೊಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಾಬಾಸಾಹೇಬರು ಹೇಳಿದಂತೆ ಕಾಂಗ್ರೆಸ್ ಸುಡುವ ಮನೆಯೇ ಹೊರತು ಅದು ಭವಿಷ್ಯ ನೀಡುವ ಮನೆಯಲ್ಲ ಎಂದು ಹೇಳಿದ್ದಾರೆ. ದಲಿತರ ಪರ ಇರುವ ಮತ್ತು ಅಂಬೇಡ್ಕರರಿಗೆ ಗೌರವ ಕೊಡುವ ಬಿಜೆಪಿ ಮತ್ತು ಮೋದಿಯವರನ್ನು ಸರ್ವರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯನವರು ಹಗರಣಗಳ ಮೂಲಕ ಕಾಗೆ ತರಹ ಕಪ್ಪಾಗಿದ್ದಾರೆ. ಅಲ್ಲಿ ಕಪ್ಪು ಚುಕ್ಕಿ ತೋರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ದಲಿತರಿಗೆ 42 ಸಾವಿರ ಕೊಡುವುದಾಗಿ ಬಜೆಟ್ ನಲ್ಲಿ ಪ್ರಕಟಿಸುತ್ತಾರೆ. 14 ಸಾವಿರ ಕೋಟಿಯನ್ನು ಗ್ಯಾರಂಟಿಗಾಗಿ ಅದರಿಂದ ತೆಗೆಯುತ್ತಾರೆ. ದಲಿತರ ದುಡ್ಡು ದಲಿತರು ಕೊಟ್ಟ ಗ್ಯಾರಂಟಿ ಯಾವುದು ಎಂದು ಕೇಳಿದರು.
ದಲಿತರಿಗೆ ಕೊಟ್ಟದ್ದು ಕೇವಲ 7 ಸಾವಿರ ಕೋಟಿ. ಇದರ ಕುರಿತು ಕಾಂಗ್ರೆಸ್ಸಿನ ದಲಿತ ನಾಯಕರು ಒಬ್ಬರೂ ಮಾತನಾಡುವುದಿಲ್ಲ ಎಂದು ಟೀಕಿಸಿದರು. ದಲಿತರಿಗೆ ಇಷ್ಟು ಅನ್ಯಾಯ ಆದರೂ ಎಐಸಿಸಿ ಅಧ್ಯಕ್ಷರು ದೇಶದಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಾರೆ ಎನ್ನುತ್ತಾರೆ. 65 ವರ್ಷಗಳ ಕಾಲ ಬಿಜೆಪಿ ಆಡಳಿತ ಇತ್ತೇ? ಎಂದು ಪ್ರಶ್ನಿಸಿದ್ದಾರೆ.



















