ಬೆಂಗಳೂರು: ಇಂದು ದೇಶದಲ್ಲೆಡೆ ಗಾಂಧಿ ಜಯಂತಿ ಆಚರಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿ ಅಧ್ಯಕ್ಷತೆ ವಹಿಸಿ 100 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
100 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ “ಗಾಂಧಿ ನಡಿಗೆ” (Gandhi Nadige) ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಗಾಂಧಿ ನಡಿಗೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಿಂದ ವಿಧಾನಸೌಧದವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಹೆಚ್.ಕೆ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ ಕಾಲ್ನಡಿಗೆಯಲ್ಲಿ ಸಾಗಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ರಿಜ್ವಾನ್ ಸೇರಿದಂತೆ ಹಲವರು ಕೂಡ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ನಾಯಕತ್ವ ವಹಿಸಿದ್ದರು. ಮಹಾತ್ಮ ಗಾಂಧೀಜಿಯವರ ಆಚಾರ ವಿಚಾರ ಇಂದಿನ ಸಮಾಜಕ್ಕೆ ಆದರ್ಶ ಹಾಗೂ ಮಾದರಿ. ಹೀಗಾಗಿ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಕೆಪಿಸಿಸಿಯಿಂದ ನಾವು ಪ್ರತ್ಯೇಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಸ್ವಚ್ಛತೆ ಕಾರ್ಯಕ್ರಮ ಮಾಡಲು ಮಕ್ಕಳಿಗೆ ಪ್ರತಿಜ್ಞೆ ಮಾಡುತ್ತಿದ್ದೇವೆ. ಎಲ್ಲ ಮಂತ್ರಿಗಳು, ಶಾಸಕರಿಗೆ ಆಯಾ ಜಿಲ್ಲೆಗಳಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಎಂದು ಸೂಚಿಸಲಾಗಿದ್ದು, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತಿವೆ ಎಂದು ಹೇಳಿದ್ದಾರೆ.