ವಿಜಯಪುರ: ಬಿಜೆಪಿ ವಿರುದ್ಧ ಹಗುರವಾಗಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರು ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ವಿಷದ ಹಾವು ಇದ್ದಂತೆ. ಈ ವಿಷಕಾರಿ ಹಾವು ಕಚ್ಚಿದರೆ ವ್ಯಕ್ತಿ ಸತ್ತೇ ಹೋಗುತ್ತಾನೆ. ಹೀಗಾಗಿ ಈ ವಿಷಕಾರಿ ಹಾವನ್ನು ನೀವು ಸಾಯಿಸಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಒಬ್ಬ ರಾಷ್ಟ್ರೀಯ ಅಧ್ಯಕ್ಷರಾಗಿ ಹೇಗೆ ಮಾತನಾಡಬೇಕೆಂಬ ಕಾಮನ್ ಸೆನ್ಸ್ ಇಲ್ಲ. ಆರೆಸ್ಸೆಸ್ ಅವರಿಗೇನು ಮಾಡಿದೆ? ಬಿಜೆಪಿ ಅವರಿಗೇನು ಮಾಡಿದೆ? ರಜಾಕರು ತಮ್ಮ ತಾಯಿಯನ್ನು ಹೊಡೆದರೂ ಮುಸ್ಲಿಂರ ಪರ ಏಜೆಂಟರಂತೆ ನಿಂತಿರುವುದು ದೇಶದ ದುರ್ದೈವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತರ ಹೆಸರನ್ನು ಹೇಳಿಕೊಂಡು ಜೀವನ ಮಾಡುತ್ತಿರುವ ಖರ್ಗೆ ಕಂಪನಿ, ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ದ್ರೋಹ ಮಾಡಿದ್ದಾರೆ. ಬಾಬಾಸಾಹೇಬ ದಲಿತರು ಎಂದೂ ಕಾಂಗ್ರೆಸ್ಸಿಗೆ ಸೇರಬಾರದು ಎಂದು ಹೇಳಿದ್ದರು. ಕಾಂಗ್ರೆಸ್ ಒಂದು ವಿಷದ ಹಾವು. ಅದು ದಲಿತರನ್ನು ಉದ್ಧಾರ ಮಾಡುವುದಿಲ್ಲ ಎಂದಿದ್ದರು. ಆದರೆ, ಇವರೆಲ್ಲ ಉಲ್ಟಾ ಹೇಳುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಇನ್ನೊಬ್ಬ ಪ್ರಿಯಾಂಕ್ ಖರ್ಗೆ ಎಂಬ ಬುದ್ಧಿವಂತ ರಾಜ್ಯದಲ್ಲಿದ್ದಾನೆ. ಅವರಿಗೆ ರಜಾಕಕರು ಮುಸ್ಲಿಂರು ಎನ್ನುವುದು ಗೊತ್ತಿಲ್ಲ. ಹಾಗಿದ್ರೆ ಅವರು ಲಿಂಗಾಯತರಾ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.