ನವದೆಹಲಿ: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್‌ರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿರುವಂತೆಯೇ ಸೀತಾಪುರದ ಸಂಸದ ರಾಕೇಶ್‌ರನ್ನು ಬಂಧಿಸಲಾಗಿದೆ.
ರಾಕೇಶ್ ಅವರು ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ತಮ್ಮನ್ನು 4 ವರ್ಷಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಜನವರಿ 17ರಂದು ಪೊಲೀಸರು ಸಂಸದ ರಾಕೇಶ್ ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ರಾಕೇಶ್ ಅವರು ನನ್ನನ್ನು ಮದುವೆಯಾಗುವುದಾಗಿ ಹಾಗೂ ನನ್ನ ರಾಜಕೀಯ ಬದುಕಿಗೆ ನೆರವಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿದ್ದ ಮಹಿಳೆ, ತನ್ನ ಆರೋಪಗಳಿಗೆ ಪೂರಕವಾದ ಫೋನ್ ಕರೆ ವಿವರಗಳು ಹಾಗೂ ಕಾಲ್ ರೆಕಾರ್ಡ್ ಗಳನ್ನು ಪೊಲೀಸರಿಗೆ ಸಲ್ಲಿಸಿದ್ದರು. ಕಳೆದ ವಾರ ಸಂತ್ರಸ್ತ ಮಹಿಳೆಯ ಪತಿ ಕೂಡ ಐವರು ವ್ಯಕ್ತಿಗಳ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದು, ರಾಥೋಡ್ ಮತ್ತು ಅವರ ಪುತ್ರ ಈ ಕೇಸನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬುಧವಾರ ಅಲಹಾಬಾಕ್ ಹೈಕೋರ್ಟ್ ಲಕ್ನೋ ಪೀಠವು ರಾಕೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಶರಣಾಗುವಂತೆ ಆದೇಶಿಸಿತ್ತು. ಇದಕ್ಕೂ ಮೊದಲು ಜ.23ರಂದು ಸೀತಾಪುರದ ಜನಪ್ರತಿನಿಧಿ ನ್ಯಾಯಾಲಯ ಕೂಡ ರಾಕೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಅದರಂತೆ, ಗುರುವಾರ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿರುವಾಗಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆಗೂ ಮುನ್ನ ರಾಕೇಶ್ ಅವರು ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ಪಕ್ಷೇತರರಾಗಿಯೂ ಸ್ಪರ್ಧಿಸಿದ್ದರು. ಅದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು.