ತುಮಕೂರು: ಜಾತಿಗಣತಿ ವರದಿ (Caste Census Report) ಜಾರಿಗೆ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ (SR Srinivas) ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಜಾರಿಯ ವಿಚಾರವಾಗಿ ಎಲ್ಲರೊಂದಿಗೆ ಚರ್ಚಿಸಿ ಆನಂತರ ಕ್ಯಾಬಿನೆಟ್ ನಲ್ಲಿ ಜಾರಿಗೆ ತರಲಿ. ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ ಎಂಬಂತೆ ಕಾಣುತ್ತದೆ. ಯಾವ ರೀತಿ ಜಾತಿ ಗಣತಿ ತಯಾರು ಆಗಿದೆ ಎಂಬುವುದೇ ತಿಳಿದಿಲ್ಲ. ಹೀಗಾಗಿ ಅದರ ಸಾಧಕ -ಬಾಧಕಗಳನ್ನು ಚರ್ಚೆ ಮಾಡಿ ಜಾರಿಗೆ ತರಬೇಕು. ನಮ್ಮ ಊರು, ನಮ್ಮ ತಾಲೂಕು ತೆಗೆದುಕೊಂಡರೆ ನಮಗೆ ಸಂಪೂರ್ಣ ಮಾಹಿತಿ ಇರುತ್ತದೆ. ಅದನ್ನು ನಾವು ನೋಡಿದರೆ ಗೊತ್ತಾಗುತ್ತದೆ. ನಮ್ಮ ಬಳಿ ಎಲ್ಲಾ ಮಾಹಿತಿ ಇರುತ್ತದೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಬೇಕು ಎಂದಿದ್ದಾರೆ.
ಒಕ್ಕಲಿಗರು ಹಾಗೂ ಲಿಂಗಾಯತದಲ್ಲಿ ಒಳ ಪಂಗಡಗಳಿವೆ. ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆಸಿರುತ್ತಾರೆ. ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ. ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತಾರೆ. ಆಗ ನಮ್ಮ ಸಮುದಾಯದ ಪಟ್ಟಿಗೆ ಸೇರಲ್ಲ ಎಂದಿದ್ದಾರೆ.
ಹೀಗೆ ಬರೆದಾಗ ಕುಂಚಿಟಿಗ ಎಂದು ಬರೆದುಕೊಂಡು ಹೋಗಿರುತ್ತಾರೆ. ಎಲ್ಲರನ್ನೂ ಒಕ್ಕಲಿಗ ಅಂತ ಮಾಡಲಿ. ಲಿಂಗಾಯತ ಸಮುದಾಯದಲ್ಲೂ ಅದೇ ಆಗಿರುತ್ತದೆ. ಅದರಲ್ಲಿ ಸಾಕಷ್ಟು ಒಳ ಪಂಗಡಗಳಿವೆ. ಅಲ್ಲೂ ಹಾಗೆ ಆಗಿರುತ್ತದೆ. ಹೀಗಾಗಿ ಕೆಲವು ಸಮುದಾಯದವರು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೆ, ಈ ರೀತಿಯಾಗಿದ್ದರೆ ಅದು ಅನ್ಯಾಯ ಮಾಡಿದಂತಾಗುತ್ತದೆ ಎಂದಿದ್ದಾರೆ.