ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಶಾಸಕರು ತಮ್ಮ ನಾಯಕರ ವಿರುದ್ಧ ಆಗಾಗ ಹೇಳಿಕೆಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈಗ ಮತ್ತೋರ್ವ ಶಾಸಕ ತಮ್ಮ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಮುಜುಗರ ಉಂಟಾಗಿದೆ.
ಜಿಲ್ಲೆಯ ವಿವಿಧ ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಪರಿಗಣಿಸುತ್ತಿಲ್ಲ. ಕಾಂಗ್ರೆಸ್ ನಲ್ಲಿ ನಾನೇ ಹಿರಿಯ ವ್ಯಕ್ತಿ. ಜಿಲ್ಲೆಯ ವಿಷಯದಲ್ಲಿ ನಾನು ಹಿರಿಯ ನಾಯಕ. ಆದರೆ, ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಶಾಸಕ ಹಾಗೂ ಕೆಯುಐಡಿಎಫ್ ಮಂಡಳಿ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಹಾಗೂ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನನ್ನ ಮಾತಿಗೆ ಬೆಲೆ ನೀಡುತ್ತಿಲ್ಲ. ಕೋಲಾರದಲ್ಲಿ ಒಂದಷ್ಟು ಗುಂಪುಗಳಿವೆ. ಇತ್ತೀಚೆಗೆ ಸಭೆಯಲ್ಲಿ ಗಲಾಟೆ ಆಗಿತ್ತು. ಹೀಗಾಗಿ ಎಲ್ಲರೂ ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಶಾಸಕರ ಈ ಹೇಳಿಕೆ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.