ಮುಂಬಯಿ: ಕರ್ನಾಟಕದಲ್ಲಿನ ಮದ್ಯ ಮಾರಾಟಗಾರರಿಂದ ಕಾಂಗ್ರೆಸ್ 700 ಕೋಟಿ ರೂ. ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕೋಲಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಎಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆಯೋ ಅಲ್ಲಿ, ರಾಜಮನೆತನಕ್ಕೆ ಎಟಿಎಂ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ನ್ಯಾಯಾಲಯ ಅಥವಾ ದೇಶದ ಭಾವನೆಗಳ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಜನರು ದುರ್ಬಲವಾಗಬೇಕು. ದೇಶವು ಎಷ್ಟು ದುರ್ಬಲಗೊಳ್ಳುತ್ತದೆಯೋ ಅವರು ಹೆಚ್ಚು ಬಲಗೊಳ್ಳುತ್ತಾರೆ ಎಂಬುದು ಕಾಂಗ್ರೆಸ್ ಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರದ ತಮ್ಮ ಸರ್ಕಾರವು ದೇಶದ ಹಿಂದುಳಿದವರಿಗೆ ಹೆಚ್ಚುವರಿಯಾಗಿ 3 ಕೋಟಿ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. 2 ಅವಧಿಯಲ್ಲಿ ನಮ್ಮ ಸರ್ಕಾರ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದೆ. ಅಷ್ಟೇ ಅಲ್ಲ, ಅಂದು ನಿಗದಿಪಡಿಸಿದ ಗುರಿಯನ್ನು ಸಹ ಸಾಧಿಸಲಾಗಿದೆ. ಮಹಾರಾಷ್ಟ್ರದ ಜನರು 2014 ರಿಂದ 2024 ರವರೆಗೆ ನಿರಂತರವಾಗಿ ಬಿಜೆಪಿ ಬೆಂಬಲಿಸಿದ್ದಾರೆ. ಈ ಬಾರಿಯೂ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.