ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮೇಲೆ ಕೊಲೆ ಯತ್ನ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರು ಜನರಲ್ಲಿ ನಾಲ್ವರು ಪೊಲೀಸರ ಬಲೆಗೆ ಸಿಕ್ಕಿದ್ದು, ಇನ್ನು ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿತರನ್ನು ಕಾರವಾರದ ಮಾಜಾಳಿ ಗಡಿಯಲ್ಲಿ ಬಂಧಿಸಲಾಗಿದೆ. ಕೊಲೆ ಯತ್ನ ವಿಫಲವಾದ ಬಳಿಕ ಆರೋಪಿತರು ಅಂಕೋಲಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದಲ್ಲದೆ, ಘಟನೆಯ ಬಳಿಕ ಆರೋಪಿತರಲ್ಲಿ ಒಬ್ಬ ವ್ಯಕ್ತಿ ಮೊಬೈಲ್‌ನಲ್ಲಿ ಮಾತನಾಡುತ್ತಾ, “ಕೆಲಸ ಪೂರ್ತಿ ಮಾಡದೇ ಇದ್ದರೆ ಇಲ್ಲಿ ಏಕೆ ಬಂದಿದ್ದೀರಿ?” ಎಂದು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. “ಅರೆಬರೆ ಕೆಲಸ ಮಾಡಿ ಪರಾರಿಯಾಗುತ್ತೀರಾ?” ಎಂದು ಪ್ರಶ್ನಿಸುತ್ತಿರುವುದು ಕೇಳಿಬಂದಿದೆ.
ಅಂಕೋಲಾ ಪಟ್ಟಣದ ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆ ರಸ್ತೆಯಲ್ಲಿ ಆರೋಪಿತರು ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.


















