2022ರ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿ.ಡಿ. ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್ ನಗರದ ನ್ಯಾಯಾಲಯವು ರಾಗಾಗೆ ಜಾಮೀನು ನೀಡಿದೆ. ರಾಹುಲ್ ಗಾಂಧಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರ್.ಸಿ ನರ್ವಾಡಿಯಾ ಮುಂದೆ ಹಾಜರಾಗಿದ್ದರು. ಈ ವೇಳೆ ರಾಹುಲ್, ತಾವು ನಿರಪರಾಧಿ ಎಂದು ವಾದಿಸಿದರು. ನಂತರ ಅವರ ಕಾನೂನು ತಂಡ ಜಾಮೀನು ಅರ್ಜಿ ಸಲ್ಲಿಸಿತು. 15 ಸಾವಿರ ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಕೋರ್ಟ್ ಜಾಮೀನು ನೀಡಿತು. ನಾಸಿಕ್ ನಿವಾಸಿ ಮತ್ತು ಸ್ಥಳೀಯ ಸರ್ಕಾರೇತರ ಸಂಸ್ಥೆಯ ನಿರ್ದೇಶಕ ದೇವೇಂದ್ರ ಭೂತಾಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಸಿಕೊಳ್ಳುವ ವೀರ ಸಾವರ್ಕರ್ ಬ್ರಿಟಿಷರ ಮುಂದೆ ಕೈ ಜೋಡಿಸಿ, ಬ್ರಿಟಿಷ್ ಸರ್ಕಾರಕ್ಕೆ ಕೆಲಸ ಮಾಡುವುದಾಗಿ ಬೇಡಿಕೊಂಡಿದ್ದರು. ಹೀಗಾಗಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ರಾಗಾ ಹೇಳಿದ್ದರು.