ಬೆಂಗಳೂರು: ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಜಿಪಂ, ತಾಪಂ ಹಾಗೂ ಬಿಬಿಎಂಪಿ ಚುನಾವಣೆ ದಿನಾಂಕ ಘೋಷಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸವಾಲು ಹಾಕಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ರಾಜ್ಯದ ಜನರು ತೃಪ್ತಿಯಾಗಿಲ್ಲ. ಆದರೆ, ಕಾಂಗ್ರೆಸ್ ಮಾತ್ರ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಣೆಬರಹ ಏನೆಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಕಸದ ಬುಟ್ಟಿಗೆ ಸೇರಿದೆ. ಕಾಂಗ್ರೆಸ್ ಬೆಲೆ ಏರಿಕೆ ಯುಗವನ್ನು ಪ್ರಾರಂಭಿಸಿದೆ. ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ ಅಭೂತಪೂರ್ವ ಜಯ ಸಾಧಿಸಲಾಗಿದೆ. 20 ಸ್ಥಾನ ಗೆಲ್ಲುವುದಾಗಿ ಕಾಂಗ್ರೆಸ್ ಪಕ್ಷವು ಹೇಳುತ್ತಿತ್ತು. ಪೆಟ್ರೋಲ್- ಡೀಸೆಲ್ ದರ ಏರಿಸಿದ ಕಾಂಗ್ರೆಸ್ಸಿಗೆ ಈಗ ಕೇಡುಗಾಲ ಬಂದಂತಾಗಿದೆ ಎಂದು ಹೇಳಿದ್ದಾರೆ.