ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಸ್ಲಾಂ ಮೂಲಭೂತವಾದಿಗಳ ಹಿಂಸೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ಘಟನೆ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಸುನೀಲ್, ಗಣೇಶ ವಿಸರ್ಜನೆ ವೇಳೆ ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಭಾಗಿಯಾದವರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ನೋಡಿದರೆ ಸರ್ಕಾರದ ಆದ್ಯತೆ ಯಾವುದಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುವವರನ್ನು ಕಾಂಗ್ರೆಸ್ ಬೆಂಬಲಿಸಿತ್ತು ದೇವಸ್ಥಾನಗಳ ಮೇಲೆ, ಧಾರ್ಮಿಕ ಉತ್ಸವಗಳ ಮೇಲೆ ಕಲ್ಲೆಸೆಯುವವರನ್ನು ಸಿದ್ದರಾಮಯ್ಯ ಸರ್ಕಾರ ಬೆಂಬಲಿಸುತ್ತಲೇ ಬಂದಿದೆ. ಅದರ ಪರಿಣಾಮವೇ ಮದ್ದೂರು ಘಟನೆ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಕೇಳಿದಾಗಲೂ ಜಾಣ ಕಿವುಡು ತೋರುವುದು ಸಿಎಂಗೆ ಶೋಭೆ ತರುವುದಿಲ್ಲ. ಕೇಂದ್ರದ ಕಾಂಗ್ರೆಸ್ ಓಲೈಕೆಯಿಂದಾಗಿ ಕಾಶ್ಮೀರದ ಜನ ಕಲ್ಲು ತೂರಾಟದಿಂದ ವಲಸೆ ಹೋಗಿದ್ದರು. ಇವತ್ತು ಕರ್ನಾಟಕದಲ್ಲೂ ಕಲ್ಲು ತೂರಾಟ ನಡೆಯುತ್ತಿದೆ. ಬಹಳ ದೊಡ್ಡ ಗಲಭೆಗೆ ಇಸ್ಲಾಂ ಮೂಲಭೂತವಾದಿಗಳು ಪಿತೂರಿ ಮಾಡಿದ್ದಾರೆ. ಸರ್ಕಾರಕ್ಕೂ, ಮೂಲಭೂತವಾದಿಗಳಿಗೂ ಶಾಂತಿ ಬೇಕಿಲ್ಲ. ಕಲ್ಲು ತೂರಿದವರ ವಿರುದ್ಧ, ಲಾಠಿಚಾರ್ಜ್ ಮಾಡಿದವರ ವಿರುದ್ಧ ಸರ್ಕಾರ ದಿಟ್ಟತನದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


















