ರಾಜ್ಯ ಕಾಂಗ್ರೆಸ್ ಪಾಳಯದ ಆಂತರಿಕ ಬೇಗುದಿ ಕಡೆಗೂ ಬೀದಿಗೆ ಬಂದಿದೆ. ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಆಳಂದ ಶಾಸಕ ಬಿ.ಆರ್. ಪಾಟೀಲ್ ಬಯಲು ಮಾಡುತ್ತಿದ್ದಂತೆ ಹೈಕಮಾಂಡ್ ಅಲರ್ಟ್ ಆಗಿದೆ. ಈ ನಿಟ್ಟಿನಲ್ಲೇ ಡ್ಯಾಮೇಜ್ ಕಂಟ್ರೋಲ್ ಗೆ ಆಗಮಿಸಿದ ಹೈಕಮಾಂಡ್ ನಾಯಕರೂ ಈಗ ಬೆಚ್ಚಿಬಿದ್ದಿದ್ದಾರೆ.
ಹೌದು! ಸಿದ್ದರಾಮಯ್ಯ ಸರ್ಕಾರದ ಸಚಿವರ ವಿರುದ್ಧ ಒಂದಲ್ಲಾ ಎರಡಲ್ಲಾ ಸರಣಿ ಆರೋಪಗಳು ಕೇಳಿ ಬಂದಿವೆ. ಎದುರಾಗಿರುವ ಭಿನ್ನರಾಗಕ್ಕೆ ಮದ್ದು ಅರಿಯಲೆಂದೇ ನಿನ್ನೆ ರಣದೀಪ್ ಸುರ್ಜೇವಾಲಾ ಕೆಲ ಶಾಸಕರೊಟ್ಟಿಗೆ ಚರ್ಚೆ ನಡೆಸಿದರು.
ಈ ಪೈಕಿ, ಬಿ.ಆರ್. ಪಾಟೀಲ್ ರಿಂದ ಹಿಡಿದು, ಪ್ರದೀಪ್ ಈಶ್ವರ್, ಕೊತ್ತೂರು ಮಂಜುನಾಥ್, ನಾರಾಯಣ ಸ್ವಾಮಿ, ರೂಪಾ ಶಶಿಧರ್ ಹತ್ತಾರು ಆರೋಪಗಳ ಸುರಿಮಳೆ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸಂಪುಟ ಸಚಿವರು ಶಾಸಕರಿಗೆ ಕಿಮ್ಮತ್ತು ನೀಡುತ್ತಿಲ್ಲ. ನಾವು ಶಿಫಾರಸು ಮಾಡಿದ ಯಾವ ಕೆಲಸಗಳೂ ಆಗುತ್ತಿಲ್ಲ. ಅಧಿಕಾರಿಗಳು ಶಾಸಕರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ.
ಈ ಬಗ್ಗೆ ಸಚಿವರಿಗೆ ದೂರಿದರೆ ಅಧಿಕಾರಿಗಳ ಪರವೇ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿದ್ದಾಗ ನಮಗೆಲ್ಲಿಂದ ಬೆಲೆ ಬರುತ್ತೆ. ನಾವು ಮನವಿ ಮಾಡಿದ ಕೆಲಸಗಳ ಬದಲಿಗೆ ಅನ್ಯರ ಕಾರ್ಯಗಳು ಬಹು ಸುಲಭವಾಗಿ ಈ ಸರ್ಕಾರದಲ್ಲಿ ಆಗ್ತಿವೆ. ಹೀಗಿದ್ದಾಗ, ಕ್ಷೇತ್ರದಲ್ಲಿ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಹೋಗೋಣ ಅಂತಾ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಸುರಿಮಳೆಗೆ ಸ್ವಂತ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ದಂಗಾಗಿ ಹೋಗಿದ್ದಾರೆ.



















