ನವದೆಹಲಿ: ನೆಹರು ಅವಧಿಯಿಂದಲೂ ಕಾಂಗ್ರೆಸ್ ಗೆ ಸಂವಿಧಾನ ಬದಲಾಯಿಸುವ ಚಟವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪ್ರಜಾಪ್ರಭುತ್ವವನ್ನು ಇಂದು ಇಡೀ ವಿಶ್ವವೇ ಮೆಚ್ಚಿಕೊಳ್ಳುತ್ತಿದೆ.
ನಾವು ಸಂವಿಧಾನದ 75 ವರ್ಷಗಳನ್ನು ಪೂರೈಸುತ್ತಿದ್ದೇವೆ. ಆದರೆ ನಾವು 25 ವರ್ಷಗಳನ್ನು ಪೂರೈಸುತ್ತಿರುವಾಗ ಸಂವಿಧಾನವನ್ನು ನಾಶಪಡಿಸಲಾಯಿತು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಿತ್ತೊಗೆಯಲಾಯಿತು. ಇಡೀ ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು ಎಂದು ಆರೋಪಿಸಿದರು.
ಸಂವಿಧಾನ ಬದಲಾಯಿಸಲು ದೇಶದ ಮೊದಲ ಪ್ರಧಾನಿ ನೆಹರು ಬಿತ್ತಿದ ಬೀಜಕ್ಕೆ ಇಂದಿರಾ ಗಾಂಧಿ ನೀರೆರೆದರು. ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್ ನಿರ್ಧಾರವನ್ನೇ ರದ್ದುಗೊಳಿಸಿದರು. ಕಾಲಕ್ರಮೇಣ ಈ ಪದ್ಧತಿ ಪುನರಾವರ್ತನೆಯಾಗುತ್ತಿದ್ದು, ಸಂವಿಧಾನವನ್ನು ತಿದ್ದಲು ಕಾಂಗ್ರೆಸ್ ಒಗ್ಗಿಕೊಂಡಿದೆ ಎಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆದರೆ, ಒಂದೇ ಕುಟುಂಬ 55 ವರ್ಷಗಳ ಕಾಲ ಆಡಳಿತ ನಡೆಸಿದೆ. ಈ “ರಾಜವಂಶದ ರಾಜಕೀಯ” ಭಾರತದ ಸಂವಿಧಾನಕ್ಕೆ ಧಕ್ಕೆ ತಂದಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಕೇವಲ ದೊಡ್ಡ ಪ್ರಜಾಪ್ರಭುತ್ವವಲ್ಲ. ಅದು ಸಾವಿರಾರು ವರ್ಷಗಳ ಪ್ರಜಾಪ್ರಭುತ್ವ ಸಂಪ್ರದಾಯಗಳಿಂದಾಗಿ ಪ್ರಜಾಪ್ರಭುತ್ವದ ತಾಯಿ ಎಂದು ಹೆಮ್ಮೆ ಪಟ್ಟಿದ್ದಾರೆ.