ಹಾವೇರಿ: ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಭದ್ರಕೋಟೆ ಶಿಗ್ಗಾಂವಿಯ ಮತದಾರ ಉಪ ಚುನಾವಣೆಯಲ್ಲಿ ಆಶ್ಚರ್ಯ ಎಂಬಂತೆ ಕಾಂಗ್ರೆಸ್ ಗೆ ಜೈ ಎಂದಿದ್ದಾನೆ. ಸಿದ್ದರಾಮಯ್ಯ ಅವರ ಗ್ಯಾರಂಟಿ ಕೈ ಹಿಡಿಯಿತೇ? ಎಂಬ ಚರ್ಚೆ ಈಗ ಶುರುವಾಗಿದೆ.
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ನ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈಗ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಮಗನನ್ನು ಗೆಲ್ಲಿಸಿಕೊಂಡು ಬರುವಲ್ಲಿ ಬೊಮ್ಮಾಯಿ ವಿಫಲರಾಗಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯಾಸೀರ್ ಪಠಾಣ್ 13,448 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ಪಠಾಣ್ ಗೆ 1,00,587 ಮತಗಳು ಲಭಿಸಿದ್ದರೆ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ 86,960 ಮತಗಳು ದೊರೆತಿವೆ.
ವಾಲ್ಮೀಕಿ, ದಲಿತ ಮತದಾರರು ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿರುವುದರಿಂದ ಕೋಪಗೊಂಡಿರುವ ಕುರುಬ ಮತದಾರರು ‘ಕೈ’ ಹಿಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತಾಗಿದೆ ಎನ್ನಲಾಗಿದೆ.