ಶಿವಮೊಗ್ಗ : ರಾಜ್ಯದಲ್ಲಿ ಇಲಾಖಾವಾರು ಬಜೆಟ್ ಅನುದಾನವೇ ಬಿಡುಗಡೆ ಆಗುತ್ತಿಲ್ಲ, ಎಲ್ಲ ಇಲಾಖೆಗಳ ಸ್ಥಿತಿ ದಯನೀಯವಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನೇ ಮರೆತಂತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯೋಜನೆಗಳಿಗೆ ಸರ್ಕಾರದ ಅನುದಾನ ಯಾವುದೇ ಇಲಾಖೆಯಲ್ಲಿ ಶೇ.40-45ಕ್ಕಿಂತ ಹೆಚ್ಚು ಮುಟ್ಟಲು ಸಾಧ್ಯವಾಗಿಲ್ಲ. ತೆರಿಗೆ ಸಂಗ್ರಹದಲ್ಲೂ ಸರ್ಕಾರ ವಿಫಲವಾಗಿದೆ. ತೆರಿಗೆ ಸಂಗ್ರಹದಲ್ಲಿ 15 ಸಾವಿರ ಕೋಟಿ ರೂ ನಷ್ಟವಾಗಲಿದೆ ಎಂಬ ಮಾಹಿತಿ ಇದೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಹಲವೆಡೆ ಶಾಲಾ ಕಟ್ಟಡಗಳ ಸಮಸ್ಯೆಗಳಿದ್ದು, ಸರ್ಕಾರ ಗಮನಹರಿಸಿಲ್ಲ. 65 ಸಾವಿರ ಶಿಕ್ಷಕರ ಕೊರತೆಯಿದ್ದು, ಇನ್ನೂ ನೇಮಕಾತಿ ಮಾಡಿಲ್ಲ. ಪಬ್ಲಿಕ್ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಅನುದಾನ ಎಲ್ಲಿದೆ ಎಂದು ತಿಳಿಸಿಲ್ಲ. ಸಿಎಸ್ಆರ್ ಅನುದಾನದಲ್ಲಿ 1 ಸಾವಿರ ಪಬ್ಲಿಕ್ ಶಾಲೆ ಕಟ್ಟುತ್ತೇವೆ ಎನ್ನುತ್ತಾರೆ. ಆದರೆ ಕಾರ್ಖಾನೆಗಳ ಸಿಎಸ್ಆರ್ ಅನುದಾನ ಅಭಿವೃದ್ಧಿಪಡಿಸಲು ವಿನಿಯೋಗಿಸಬೇಕೆಂದು ಸಿಎಂ ಹೇಳಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ:
ಡಿ.ಕೆ.ಶಿವಕುಮಾರ್ ನನಗೆ ವಿಶ್ವಮಾನವ ಎಂದು ಹೇಳಲಿ ಪರವಾಗಿಲ್ಲ, ನಾನು ಸರ್ವಜ್ಞನ ವಚನ ಎಂದಿಗೂ ಹೇಳಲ್ಲ. ನನ್ನದು ತಾಯಿ ಹೃದಯವಿದ್ದಂತೆ, ಹಾಗಾಗಿ ಜನರಿಗೆ ಸ್ಪಂದಿಸುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ನನಗೆ ಎಷ್ಟು ಸ್ಪಂದಿಸಿದ್ದಾರೆ, ಕನಕಪುರ ಬಂಡೆ ಎಂದು ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಮೈಸೂರಿನಿಂದ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಕಾರವಾರದಲ್ಲಿ ಪಲ್ಟಿ.. ಓರ್ವ ವಿದ್ಯಾರ್ಥಿ ಸಾವು, 26ಕ್ಕೂ ಹೆಚ್ಚು ಮಕ್ಕಳಿಗೆ ಗಾಯ



















