ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ವಾಕ್ಸಮರ ನಡೆದಿತ್ತು. ಅದು ಈಗಲೂ ಮುಂದುವರೆದಿದೆ.
ಟ್ವೀಟರ್ ನಲ್ಲಿ “ಪಳೆಯುಳಿಕೆ ಪಾರ್ಟಿ ಕಾಂಗ್ರೆಸ್” ಎಂದು ಜೆಡಿಎಸ್ ಘಟಕ ರಾಜ್ಯ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿತ್ತು. ಸದ್ಯ ಅದೇ ಟ್ವೀಟ್ ನ್ನು ರೀ ಟ್ವೀಟ್ ಮಾಡಿರುವ ಕಾಂಗ್ರೆಸ್, ಚನ್ನಪಟ್ಟಣದ (Channapatna) ಫಲಿತಾಂಶ ನಿಮ್ಮ ಪಕ್ಷದ ಐರನ್ ಲೆಗ್ ಯಾರು ಎನ್ನುವುದನ್ನು ನಿಮಗೇ ತೋರಿಸಿಕೊಟ್ಟಿದೆ ಎಂದು ವ್ಯಂಗ್ಯವಾಡಿದೆ.
ಪಳೆಯುಳಿಕೆ ಪಾರ್ಟಿ ಕಾಂಗ್ರೆಸ್! ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ ಕಾಂಗ್ರೆಸ್ ಪಕ್ಷದ ಪಕಳೆಗಳು ದೇಶಾದ್ಯಂತ ಒಂದೊಂದೇ ಉದುರುತ್ತಿವೆ ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು. ಮಹಾರಾಷ್ಟ್ರದಲ್ಲಿ ನೆಲಕಚ್ಚಿದೆ. ಅಲ್ಲಿ 6ನೇ ಸ್ಥಾನಕ್ಕೆ, ಜಾರ್ಖಂಡ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದೆ. ಆದರೂ ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಗೆದ್ದ 3 ಬೈಎಲೆಕ್ಷನ್ ಸೀಟುಗಳನ್ನು ಮುಖದ ಮೇಲಿಟ್ಟುಕೊಂಡು ಮೆರೆಯುತ್ತಿದೆ. ಮೆರೆಯಲಿ ಅಂತ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು.
ಮಹಾರಾಷ್ಟ್ರದಲ್ಲಿ ಮತದಾರರು ಕೈ ಪಕ್ಷದ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ಕಾಂಗ್ರೆಸ್ಸಿಗರೇ.. ಅನ್ಯರ ಬಗ್ಗೆ ಹಗುರವಾಗಿ ಮಾತನಾಡುವ ನಿಮ್ಮ ಹರಕು ಬಾಯಿಗಳಿಗೆ, ನಿಮ್ಮ ತೂತುಬಿದ್ದ ಮಡಿಕೆಯಂತಾಗಿರುವ ನಿಮ್ಮ ಪಕ್ಷಕ್ಕೆ ಮೊದಲು ತ್ಯಾಪೆ ಹಚ್ಚಿ. 288 ಸೀಟುಗಳ ಮಹಾರಾಷ್ಟ್ರದಲ್ಲಿ ಹದಿನಾರೇ ಸೀಟಿಗೆ ಬೋರಲು ಬಿದ್ದ ಸೋಕಾಲ್ಡ್ ನ್ಯಾಷನಲ್ ಪಾರ್ಟಿ ನಾಯಕರೇ, ಇನ್ನೊಬ್ಬರ ಬಚ್ಚಲು ಮನೆ ಮೂಸಿ ನೋಡುವ ಚಟ ಬಿಡಿ ಅಂತ ಜೆಡಿಎಸ್ ಟ್ವೀಟ್ ಮಾಡಿತ್ತು.
224 ಕ್ಷೇತ್ರಗಳಲ್ಲಿ 19 ಗೆದ್ದಿದ್ದೆವು. ಅದೂ ಯಾವ ಮೈತ್ರಿಯೂ ಇಲ್ಲದೇ!! ನಾವು ಪ್ರಾದೇಶಿಕ, ನೀವು ಸೋಕಾಲ್ಡ್ ನ್ಯಾಶನಲ್! ಐರೆನ್ ಲೆಗ್ ಪಾರ್ಟಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಿದೆ. ಅದಕ್ಕೆ ಬಲಿಯಾದ ಪಕ್ಷ ಉದ್ಧವ್ ಠಾಕ್ರೆಯವರ ಶಿವಸೇನೆ!! ಮೈತ್ರಿಗೆ, ಮೈತ್ರಿ ಪಕ್ಷಗಳಿಗೆ ಮಿತ್ರದ್ರೋಹ ಮಾಡುತ್ತಿರುವ ಕಾಂಗ್ರೆಸ್ ಸಂವಿಧಾನವನ್ನೇ ಅಣಕಿಸುತ್ತಿದೆ. ಅನ್ಯರ ಅಣಕವೇ ಮನೆಹಾಳು ಕಾಂಗ್ರೆಸ್ಸಿನ ಕಾಯಕ ಅಂತ ಟ್ವೀಟ್‌ನಲ್ಲಿ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿತ್ತು.
ಜೆಡಿಎಸ್ ಟ್ವೀಟ್‌ಗೆ ರೀಟ್ವೀಟ್ ಮಾಡಿರುವ ಕಾಂಗ್ರೆಸ್, ಪಳೆಯುಳಿಕೆ ಪಕ್ಷ ಯಾವುದು ಜನತಾದಳ? 19 ಸ್ಥಾನದಿಂದ 18 ಸ್ಥಾನಕ್ಕೆ ಕುಸಿದವರಾ? ಅಥವಾ 136 ರಿಂದ 138 ಸ್ಥಾನಕ್ಕೆ ಏರಿ ಸುಭದ್ರ, ಜನಪರ ಸರ್ಕಾರ ನಡೆಸುತ್ತಿರುವವರಾ? ಎಂದು ಪ್ರಶ್ನಿಸಿದೆ.
ತಾತ ಮಾಜಿ ಪ್ರಧಾನಿ, ತಂದೆ ಮಾಜಿ ಮುಖ್ಯಮಂತ್ರಿಯಾದರೂ ಮನೆಮಗನ ಹ್ಯಾಟ್ರಿಕ್ ಸೋಲಿಗೆ ಪರಚಿಕೊಳ್ಳುತ್ತಿರುವವರಾ? ಅಸ್ಥಿತ್ವಕ್ಕಾಗಿ ನಂಬಿದ ಸಿದ್ಧಾಂತವನ್ನೇ ಮೂಲೆಗೆಸೆದು ಕೋಮುವಾದಿಗಳ ಸಖ್ಯ ಬೆಳೆಸಿದವರಾ? ಇನ್ನೊಬ್ಬರ ಬಚ್ಚಲು ಮನೆ ಬಗ್ಗಿ ನೋಡುವ ಬಗ್ಗೆ ಪರಪ್ಪನ ಅಗ್ರಹಾರದಲ್ಲಿರುವ ಮತ್ತೊಬ್ಬ ಮನೆಮಗನನ್ನು ಕೇಳಿ! ಚನ್ನಪಟ್ಟಣದ ಫಲಿತಾಂಶ ನಿಮ್ಮ ಪಕ್ಷದ ಐರನ್ ಲೆಗ್ ಯಾರು ಎನ್ನುವುದನ್ನು ನಿಮಗೇ ತೋರಿಸಿಕೊಟ್ಟಿದೆ! ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.