ಬೆಂಗಳೂರ : ದೇಶದಲ್ಲಿರುವ ಹಿಮದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿ ರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯನ್ನು ರಚಿಸುವುದಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಂದಾಗಿದೆ.
ದೇಶದಲ್ಲಿರುವ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಕೂಲಂಕುಶವಾಗಿ ಅರಿತುಕೊಂಡು ಪರಿಹಾರ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯನ್ನು ಎಐಸಿಸಿ ರಚನೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಈ ಮಂಡಳಿ ರಚನೆಗೆ ಇತ್ತೀಚೆಗಷ್ಟೇ ಅನುಮೋದನೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ. ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೋಯ್ಲಿ ಕೂಡ ಈ ಮಂಡಳಿಯಲ್ಲಿದ್ದಾರೆ. ಐವರು ಮಾಜಿ ಮುಖ್ಯಮಂತ್ರಿಗಳು, ಹತ್ತು ಮಂದಿ ಕೇಂದ್ರದ ಮಾಜಿ ಸಚಿವರನ್ನು ಈ ಮಂಡಳಿ ಒಳಗೊಂಡಿದೆ. ಮುಂದಿನ ಕಾರ್ಯಯೋಜನೆ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೈಗೆತ್ತಿಗೊಳ್ಳಬೇಕಾದ ವಿಷಯಗಳ ಬಗ್ಗೆ ಎಐಸಿಸಿಯ ಹಿಂದುಳಿದ ಘಟಕಕ್ಕೆ ಈ ಸಲಹಾ ಮಂಡಳಿಯು ಸಲಹೆಗಳನ್ನು ನೀಡಲಿದೆ.



















