ನವದೆಹಲಿ : ವೋಟ್ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭೆಯಲ್ಲಿ ಗುಡುಗಿದ್ದಾರೆ.
ರಾಜ್ಯಸಭೆಯಲ್ಲಿ ಸೋಮವಾರ ಈ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆಗಳನ್ನು ಪ್ರಚಾರ ಮಾಡುತ್ತಾ ಹೋದರೆ, ಮತದಾರರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದರೆ ಅದರಿಂದ ಪ್ರತಿಪಕ್ಷಗಳಿಗೆ ಒಳ್ಳೆಯದು ಮಾಡುವುದಿಲ್ಲ” ಎಂದು ಹೇಳಿದ್ದಾರೆ.
“ನಮ್ಮದು ಬಹಳ ದೊಡ್ಡ ರಾಷ್ಟ್ರ. ಕಾಂಗ್ರೆಸ್ ಪಕ್ಷವು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು. ನನ್ನ ಪ್ರತಿಪಕ್ಷ ಸ್ನೇಹಿತರೇ ದಯವಿಟ್ಟು ನೆನಪಿಡಿ ‘ವೋಟ್ ಚೋರಿ’ ಎಂಬ ಪದಗಳನ್ನು ಬಳಸುವುದರಿಂದ ನೀವು ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸುತ್ತೀರಿ. ನೀವು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ” ಎಂದು ದೇವೇಗೌಡರು ಕಟುವಾದ ಶಬ್ದಗಳಲ್ಲಿ ತಿಳಿಸಿದ್ದಾರೆ.
ʼವೋಟ್ ಚೋರಿʼ ಎಂಬ ಅಪಪ್ರಚಾರದ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವವನ್ನು ದೂಷಿಸುವ ಮೂಲಕ ಮತ್ತು ಮತದಾರರ ಮನಸ್ಸಿನಲ್ಲಿ ಅನುಮಾನವನ್ನು ಸೃಷ್ಟಿಸುವ ಮೂಲಕ ಪ್ರತಿಪಕ್ಷಗಳು ಏನು ಗಳಿಸಲಿವೆ? ನಿಮ್ಮ ಮನಸ್ಸಿಗೆ ಏನಾಗಿದೆ? ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಿ. ನಾನು ಏಳು ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿ ಚುನಾವಣೆಯಲ್ಲಿ ಸೋಲು ಗೆಲುವನ್ನು ಎದುರಿಸಿದ್ದೇನೆ. ನಾನು ಎಂದಿಗೂ ಮತಗಳ್ಳತನದ ಅಂತಹ ವಿಷಯಗಳನ್ನು ಹೇಳಲಿಲ್ಲ” ಎಂದು ಒತ್ತಿ ಹೇಳಿದ್ದಾರೆ.
ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಬರೆದ ಪತ್ರವನ್ನು ಅವರು ಉಲ್ಲೇಖಿಸಿ “ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ ನೆಹರು ಅವಧಿಯಲ್ಲಿಯೂ ಸಹ ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಇದ್ದವು” ಎಂದಿದ್ದಾರೆ.
“ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು . ಮತದಾರರ ಪಟ್ಟಿಯ ಕೂಲಂಕಶ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು. ಆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆರು ಶಾಸಕರು ಸಿಕ್ಕಿದ್ದಾರೆ” ಎಂದು ಟೀಕಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಪ್ರಧಾನಿಗಳ ವಿರುದ್ಧ ಪ್ರತಿಪಕ್ಷಗಳು ಆರೋಪಗಳನ್ನು ಮಾಡಲು ಅವರು ಏಕೆ ಬಯಸುತ್ತಾರೆ ಎಂದು ಪ್ರಶ್ನಿಸಿ, “ದೇಶದಲ್ಲಿ ಚುನಾವಣಾ ಆಯೋಗವಿದೆ, ಸುಪ್ರೀಂ ಕೋರ್ಟ್ ಇದೆ. ಈ ಎಲ್ಲ ವಿಷಯಗಳನ್ನು ಸರಿಪಡಿಸಲು ಚುನಾವಣಾ ಆಯೋಗವು ಎಲ್ಲ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ. ರಾಷ್ಟ್ರದ ಜನರು ನರೇಂದ್ರ ಮೋದಿ ಅವರ ಸರಕಾರದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಮತ್ತು ಮುಂದಿನ ಲೋಕಸಭೆ ಚುನಾವಣೆಯ ನಂತರವೂ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ” ಎಂದು ದೇವೇಗೌಡರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಸ್ಕೂಲ್’ ಆರಂಭ | ಜೈನ್ ಸ್ಪೋರ್ಟ್ಸ್ ಜೊತೆ ಐತಿಹಾಸಿಕ ಒಪ್ಪಂದ



















