ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಮುಗಿದಿದೆ. ಫಲಿತಾಂಶಕ್ಕಾಗಿ ಅಬ್ಯರ್ಥಿಗಳು ಸೇರಿದಂತೆ ಇಡೀ ರಾಜ್ಯವೇ ಕಾಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಗೆ ಸಂಕಷ್ಟ ಶುರುವಾಗಿದೆ.
ಯೋಗೇಶ್ವರ್ ಮೊದಲ ಪತ್ನಿಯ ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿದ ಆರೋಪದಡಿ ಸಿಪಿ ಯೋಗೇಶ್ವರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದ್ದು, ನಾಳೆಗೆ ವಿಚಾರಣೆ ನಡೆಯಲಿದೆ.
ಸಿಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಮಗ ಶ್ರವಣ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಮನೆಯಿದೆ. ಈ ಮನೆಯನ್ನು ತಾಯಿ ಹಾಗೂ ಮಗ ಸೇರಿ ಮನೆಯನ್ನು ನಿಶಾ ಯೋಗೇಶ್ವರ್ ಗೆ ಉಡುಗೊರೆ ನೀಡಿದ್ದಾರೆ. ನಿಶಾ ಕೂಡ ಮೊದಲ ಪತ್ನಿಯ ಮಗಳು. ಆದರೆ, ಇದಕ್ಕೆ ತಗಾದೆ ತೆಗೆದಿರುವ ಯೋಗೇಶ್ವರ್, ಈ ಮನೆಯಲ್ಲಿ ನನಗೂ ಭಾಗ ಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಶ್ರವಣ್ ಹೆಸರಿನಲ್ಲೇ ಹಾಕಿದ್ದಾರೆ. ನಾನು ನನ್ನ ಅಕ್ಕನಿಗೆ ಮನೆ ಗಿಫ್ಟ್ ನೀಡಿಲ್ಲ. ಮನೆಯಲ್ಲಿ ನನಗೂ ಭಾಗ ಬೇಕು ಎಂದು ಅರ್ಜಿ ಹಾಕಿದ್ದಾರೆ. ಅರ್ಜಿಯಲ್ಲಿ ಶ್ರವಣ್ ಸಹಿಯನ್ನು ಯೋಗೇಶ್ವರ್ ನಕಲು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಶ್ರವಣ್ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಅಕ್ಕನಿಗೆ ಮನೆಯನ್ನು ಉಡುಗೊರೆಯಾಗಿ ನೀಡಿದ್ದೇನೆ. ನಾನು ಭಾಗ ಕೇಳಿಲ್ಲ ಎಂದು ಈಗ ಶ್ರವಣ್ ಆರೋಪಿಸಿದ್ದಾರೆ.