ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರನ್ಯಾ ರಾವ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ರನ್ಯಾ ರಾವ್ ಗೆ ಸಂಬಂಧಿಸಿದ ಬೆಂಗಳೂರು, ತುಮಕೂರಿನಲ್ಲಿರುವ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬೆಂಗಳೂರಿನ ಅರ್ಕಾವತಿ ಲೇಔಟ್ ನ ಫ್ಲಾಟ್, ತುಮಕೂರಿನ ಕೈಗಾರಿಕಾ ಜಮೀನು, ಆನೇಕಲ್ ನ ಕೃಷಿ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ರನ್ಯಾ ರಾವ್ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 14.213 ಕೆಜಿಯಷ್ಟು 24 ಕ್ಯಾರೆಟ್ ಚಿನ್ನದ ಸಮೇತ ಸಿಕ್ಕಿಬಿದ್ದಿದ್ದರು. ಅಲ್ಲದೇ, ರನ್ಯಾ ರಾವ್ ಮನೆಯಲ್ಲಿ 2.67 ಕೋಟಿ ರೂ. ನಗದು ಹಾಗೂ 2.06 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಯಾಗಿತ್ತು. ತರುಣ್ ಕೊಂಡೂರು ರಾಜು ಜೊತೆ ಸೇರಿಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ದುಬೈ, ಉಗಾಂಡ, ಸ್ವಿಜರ್ ಲ್ಯಾಂಡ್, ಯುಎಸ್ ಎ ಸೇರಿ ಬೇರೆ ಬೇರೆ ದೇಶಗಳಿಗೆ ಸ್ಮಗ್ಲಿಂಗ್ ಮಾಡುತ್ತಿದ್ದರು. ದುಬೈನಿಂದ ಚಿನ್ನ ತಂದು ಭಾರತದಲ್ಲಿ ಮಾರಾಟ ಮಾಡುತ್ತಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಮಗ್ಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಹವಾಲಾ ದಂಧೆ ಕೂಡ ನಡೆಸುತ್ತಿದ್ದರು ಎಂಬುವುದು ತನಿಖೆ ವೇಳೆ ದೃಢಪಟ್ಟಿದೆ.