ಕೋಲಾರ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜ. 2ರಂದು ಕೋಲಾರ ಬಂದ್ ಗೆ ಕರೆ ನೀಡಲಾಗಿದೆ.
ಜಿಲ್ಲಾ ಪ್ರಗತಿಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ದಲಿತ ಮುಖಂಡ ಡಾ. ಚಂದ್ರಶೇಖರ್, ಅಮಿತ್ ಶಾ, ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ದೇಶದ ಎಲ್ಲ ಜನರಿಗೂ ಅವಮಾನ ಮಾಡಿದಂತಾಗಿದೆ. ನಾವು ತಾಳ್ಮೆಯಿಂದ ಇದ್ದರೂ ಬೆನ್ನಿಗೆ ಚುಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಸಂವಿಧಾನ ತಿದ್ದುವ ಹುನ್ನಾರ ನಡೆಸಲಾಗಿದ್ದು, ಲೋಕಸಭೆಯಲ್ಲಿಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಅವಹೇಳನಕಾರಿಯಾಗಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರರ ಹೆಸರನ್ನು ನಾವು ಪ್ರತಿ ದಿನ 3 ಬಾರಿ ಅಲ್ಲ100 ಬಾರಿ ಸ್ಮರಣೆ ಮಾಡುತ್ತೇವೆ. ಅದನ್ನು ಕೇಳಲು ಅಮಿತ್ ಶಾ ಯಾರು? ಎಂದು ಗುಡುಗಿದ್ದಾರೆ.
ಮುಖಂಡ ಟಿ.ವಿಜಯ್ ಕುಮಾರ್ ಮಾತನಾಡಿ, ಈ ಹೇಳಿಕೆಯಿಂದ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಬೆಳಗ್ಗೆ, ಸಂಜೆ ನೆನೆಯಲೇಬೇಕಾಗಿದೆ. ನಮ್ಮ ಸಿಟ್ಟು ಕೈಗೆ ಬಂದರೆ ಸಂವಿಧಾನ ವಿರೋಧಿಗಳು ಚೂರು ಚೂರಾಗುತ್ತಾರೆಂದು ಎಚ್ಚರಿಕೆ ನೀಡಿ, ಬಂದ್ ಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.