ಬೆಂಗಳೂರು: ಅಪೂರ್ಣವಾಗಿದ್ದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಸೋಮವಾರ) ಸಂಜೆ ನಡೆಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು, ಸಚಿವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯ ಶಾಸಕರಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ಜುಲೈ ಅಂತ್ಯದಲ್ಲಿ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಸಭೆ ನಡೆಸಿದ್ದರು.
ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಸಭೆಯಲ್ಲಿ ಶಾಸಕರು ತಮ್ಮ ಅಹವಾಲು ಸಲ್ಲಿಸಲಿದ್ದಾರೆ. ಇದೇ ವೇಳೆ 50 ಕೋ. ರೂ. ಅನುದಾನದ ಬಳಕೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳು ಒಳಗೊಂಡಂತೆ ಹಲವು ವಿಷಯಗಳು ಚರ್ಚೆ ನಡೆಸುವ ಸಾಧ್ಯತೆ ಇದೆ.
ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಜೊತೆಗಿನ “ಒನ್ ಟು ಒನ್’ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯ ಶಾಸಕರು ದೂರುಗಳ ಸುರಿಮಳೆಗರೆದ ಬೆನ್ನಿಗೆ ಸ್ವತಃ ಸಿಎಂ ಸಿದ್ದರಾಮಯ್ಯ, ಸಚಿವರು ಮತ್ತು ಶಾಸಕರೊಂದಿಗೆ ಸರಣಿ ಸಭೆ ಹಮ್ಮಿಕೊಂಡಿದ್ದರು.
ಅನಿವಾರ್ಯವಾಗಿ ದೆಹಲಿಯಲ್ಲಿ ಹೈಕಮಾಂಡ್ ಅನ್ನು ಸಿಎಂ ಭೇಟಿ ಮಾಡಿದ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಐದು ಜಿಲ್ಲೆಗಳ ಸಚಿವರು ಹಾಗೂ ಶಾಸಕರೊಂದಿಗಿನ ಸಭೆ ಮುಂದೂಡಿಕೆಯಾಗಿತ್ತು. ಆ ಸಭೆಯನ್ನು ಸಿಎಂ ಇಂದು ಸಂಜೆ ನಡೆಸಲಿದ್ದಾರೆ.