ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ದಿಯಾ ಸಿನಿಮಾ ನಿರ್ಮಾಪಕ ಕೃಷ್ಣ ಚೈತನ್ಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ರಾಮಮೂರ್ತಿ ಎಂಬುವವರು ನೀಡಿದ ದೂರಿನನ್ವಯ ಬೆಳ್ಳಂದೂರು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ದಿಯಾ ಸಿನಿಮಾ ನಿರ್ಮಾಪಕ ಕೃಷ್ಣ ಚೈತನ್ಯ, ನಕಲಿ ದಾಖಲೆ ಸೃಷ್ಟಿಸಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿ ಜೀವಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಮಮೂರ್ತಿ ಅವರು ನಿರ್ಮಾಪಕ ಕೃಷ್ಣಚೈತನ್ಯ, ಸೈನಪ್ಸಿ ಕಂಪನಿ ಎಂ.ಡಿ ಸಚಿನ್ ನಾರಾಯಣ್ ಹಾಗೂ ಸಹಚರರ ವಿರುದ್ದ ದೂರು ದಾಖಲಿಸಿದ್ದಾರೆ.

2005 ರಲ್ಲಿ ಜಮೀನು ಖರೀದಿಸಿದ್ದ ರೈತ ರಾಮಮೂರ್ತಿ, ನರ್ಸರಿ ಮಾಡುವುದಕ್ಕೆ 6 ಲಕ್ಷ ರೂ.ಗೆ ಭೋಗ್ಯಕ್ಕೆ ನೀಡಿದ್ದರು. ಶಶಿಕಲಾ ಕೋದಂಡಚಾರಿ ಎಂಬುವವರಿಗೆ ನರ್ಸರಿ ಮಾಡಲಿಕ್ಕೆ ಭೋಗ್ಯಕ್ಕೆ ನೀಡಿದ್ದರು. ಆದರೆ, ಆ. 13ರಂದು ಬೆಳಗ್ಗೆ ಜಮೀನು ಬಳಿ ಬಂದಿದ್ದ ನಿರ್ಮಾಪಕ ಕೃಷ್ಣಚೈತನ್ಯ ಮತ್ತು ಸಹಚರರು ಅವಾಚ್ಯ ಶಬ್ದಗಳಿಂದ ನಿಂತಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಿರ್ಮಾಪಕ ಕೃಷ್ಣಚೈತನ್ಯ ಹಾಗೂ ಸೈನಪ್ಸಿ ಕನ್ಸ್’ಟ್ರಕ್ಷನ್ ಎಂ.ಡಿ. ಸಚಿನ್ ನಾರಾಯಣ್ ವಿರುದ್ದ ರೈತ ರಾಮಮೂರ್ತಿ ಹತ್ತಕ್ಕೂ ಅಧಿಕ ಕಡೆ ದೂರು ಸಲ್ಲಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ. ಕೃಷ್ಣಚೈತನ್ಯ ಹಾಗೂ ಸಚಿನ್ ನಾರಾಯಣ್ ರಿಗೆ ಕಂದಾಯ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಗಳು ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸಿಎಂ, ಗೃಹ ಸಚಿವರು, ಕಂದಾಯ ಸಚಿವರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತ, ಐಜಿ ರಿಜಿಸ್ಟೇಷನ್, ಕಂದಾಯ ಇಲಾಖೆ ಕಾರ್ಯದರ್ಶಿ, ಡಿಜಿಐಜಿಪಿ, ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.