ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.
ಕಾನೂನು ಬಾಹಿರವಾಗಿ ಬಿಡಿಎ ಹಾಗೂ ಕೆಐಎಡಿಬಿಯಿಂದ ರಾಜಕೀಯ ಹಾಗೂ ಅಧಿಕಾರ ಪ್ರಭಾವ ಬಳಸಿಕೊಂಡು 240 ಕೋಟಿ ರೂ. ಮೊತ್ತದ ಸರ್ಕಾರಿ ಸ್ವತ್ತನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ. ಇದರ ವಿರುದ್ಧ ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಬಿಡಿಎ ಹಾಗೂ ಕೆಐಎಡಿಬಿ ಸಂಸ್ಥೆಗಳಿಂದ ಸಿ.ಎ. ನಿವೇಶನವನ್ನು ಕಾನೂನುಬಾಹಿರವಾಗಿ ಪಡೆದಿರುವ ಕುರಿತು ದೂರು ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಆರ್.ರಮೇಶ್, ಮಲ್ಲಿಕಾರ್ಜುನ ಖರ್ಗೆ ಕುಟುಂಬವು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡೇ ಕೋಟ್ಯಂತರ ರೂ. ಮೊತ್ತದ ಸ್ವತ್ತನ್ನು ಸ್ವಂತಕ್ಕೆ ಬಳಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಮಾರುತಿ ರಾವ್ ಡಿ. ಮಾಲೆ ಮುನ್ನಡೆಸುತ್ತಿದ್ದರು. ಅವರ ನಿಧನದ ನಂತರ ಖರ್ಗೆ ಕುಟುಂಬವು ತನ್ನೆಲ್ಲ ಸದಸ್ಯರಿಗೆ ಟ್ರಸ್ಟಿಗಳನ್ನಾಗಿ ಮಾಡಿ ಇಡೀ ಆಸ್ತಿಯನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ. ಬಿಡಿಎನಿಂದ 2014ರಲ್ಲಿ ಸಿ.ಎ ನಿವೇಶನವನ್ನು ಶೈಕ್ಷಣಿಕ ಉದ್ದೇಶಕ್ಕೆಂದು 30 ವರ್ಷಕ್ಕೆ ಗುತ್ತಿಗೆಗೆ ಪಡೆಯಲಾಯಿತು.
ಈ ವಿಷಯ ಮರೆಮಾಚಿ ಕೆಐಎಡಿಬಿಯಿಂದ ಏರ್‌ಪೋರ್ಟ್ ಬಳಿಯ ರಕ್ಷಣಾ-ವೈಮಾನಿಕ ಪಾರ್ಕ್‌ನಲ್ಲಿ 5 ಎಕರೆ ವಿಸ್ತೀರ್ಣದ ಕೈಗಾರಿಕೆ ನಿವೇಶನವನ್ನು ಮಂಜೂರು ಮಾಡಿಸಿಕೊಂಡಿದೆ. ಅರ್ಜಿ ಹಾಕಿದ ಮೂರೇ ತಿಂಗಳಲ್ಲಿ ನಿವೇಶನ ಹಂಚಿಕೆ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.