ಮೈಸೂರು: ಮುಡಾ ವಿಚಾರದಲ್ಲಿ ಈಗಾಗಲೇ ಸಿಎಂ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಮಧ್ಯೆ ಆರ್ ಟಿಐ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೂ(ED) ದೂರು ಸಲ್ಲಿಸಿದ್ದಾರೆ.
ಈ ಕುರಿತು ಇಡಿ ದೂರು ದಾಖಲಿಸಿಕೊಂಡರೆ ಸಿಎಂಗೆ ಮತ್ತಷ್ಟು ಸಂಕಷ್ಟ ಶುರುವಾಗುವ ಸಾಧ್ಯತೆ ಇದೆ. ಅಧಿಕಾರ ದುರ್ಬಳಕೆ ಮಾಡಿ ಮುಡಾದಿಂದ 14 ಸೈಟುಗಳನ್ನು ಅಕ್ರಮವಾಗಿ ಪಡೆಯಲಾಗಿದೆ ಎಂದು ತಮ್ಮ ದೂರಿನಲ್ಲಿ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಬೆಂಗಳೂರು ಶಾಂತಿ ನಗರದಲ್ಲಿರುವ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕರಿಗೆ ಇ ಮೇಲ್ ನಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಆದರೆ, ಈ ಕುರಿತು ಇಡಿಯಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದರು. ಹೀಗಾಗಿ ಈ ಪ್ರಕರಣ ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು.
ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಗರಣದ ವಿರುದ್ದ ಮೈಸೂರು ಚಲೋ ಪಾದಯಾತ್ರೆ ನಡೆಸಿದ್ದವು. ನಂತರ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ಪೀಠವು ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿಯುವುದರೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವಂತೆ ಸ್ನೇಹಮಯಿ ಕೃಷ್ಣ ಸೂಚಿಸಿತ್ತು.
ಸದ್ಯ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ. ಇಷ್ಟಕ್ಕೆ ಬಿಡದ ಸ್ನೇಹಮಯಿ ಕೃಷ್ಣ ಈಗ ಇಡಿಗೂ ದೂರು ನೀಡಿದ್ದಾರೆ.