ಬೆಂಗಳೂರು: ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಹಲವರು ಸಿಎಂ ವಿರುದ್ಧವೇ ನೇರ ಆರೋಪ ಮಾಡುತ್ತಿದ್ದಾರೆ. ಇನ್ನೊಂದೆಡೆ ಪವರ್ ಶೇರಿಂಗ್ ಫೈಟ್ ನಡೆಯುತ್ತಿದೆ. ಈ ಮಧ್ಯೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರ ಮುಂದೆ ದೂರು ನೀಡಲು ಹಲವರು ತುದಿಗಾಲ ಮೇಲೆ ನಿಂತಿದ್ದಾರೆ.
ಚಾಪೆ ಕೆಳಗೆ ನುಗ್ಗು, ರಂಗೋಲಿ ಕೆಳಗೆ ನುಗ್ಗು!
ಅನುದಾನ ಕದನ, ಪವರ್ ಶೇರಿಂಗ್ ಮಧ್ಯೆ ರಾಜ್ಯ ಉಸ್ತುವಾರಿ ಆಗಮಿಸುತ್ತಿದ್ದು, ಮೇಲ್ನೋಟಕ್ಕೆ ಡಿಕೆಶಿ ಮತ್ತು ಸಿದ್ದು ಬಣದ ಗುದ್ದಾಟವನ್ನು ಶಮನ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಪವರ್ ಶೇರಿಂಗ್ ತಂತ್ರವಿದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವು ಶುರುವಾಗಿದೆ. ಈ ಹಿನ್ನೆಲೆಯಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರು ಎಲ್ಲ ಶಾಸಕರ ಮನವಿ, ನೋವು ಆಲಿಸಿ ಸಲಹೆ- ಸೂಚನೆ ನೀಡಲಿದ್ದಾರೆ. ಸುರ್ಜೇವಾಲಾ ಆಗಮಿಸುವ ಸುದ್ದಿ ಕೇಳಿದ್ದೇ ತಡ, ಕಾಂಗ್ರೆಸ್ ನಲ್ಲಿನ ಎರಡೂ ಬಣದವರು ಆ ಬಣ ಚಾಪೆ ಕೆಳಗೆ ನುಗ್ಗಿದರೆ, ನಾವು ರಂಗೋಲಿ ಕೆಳಗೆ ನುಗ್ಗಬೇಕು ಎಂದು ತಂತ್ರಕ್ಕೆ ಪ್ರತಿತಂತ್ರ ರೂಪಿಸತ್ತಿದ್ದಾರೆ.
ನಾಳೆ ಬೆಳಗ್ಗೆ 11ಗಂಟೆಗೆ ಬೆಂಗಳೂರಿಗೆ (Bengaluru) ಆಗಮಿಸಲಿರುವ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮಧ್ಯಾಹ್ನ 3ಕ್ಕೆ ಒನ್ ಟು ಒನ್ ಶಾಸಕರನ್ನು ಭೇಟಿಯಾಗಿ ಸಮಸ್ಯೆ ಆಲಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ಶಾಸಕರು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಅಸಮಾಧನ ತೋಡಿಕೊಂಡಿದ್ದರು. ಅನುದಾನ, ಭ್ರಷ್ಟಾಚಾರ, ಅಭಿವೃದ್ಧಿ ವಿಷಯವಾಗಿ ತಮ್ಮ ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದರು. ಹೀಗಾಗಿ ಅಂತಹ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸುರ್ಜೇವಾಲಾ ತೀರ್ಮಾನಿಸಿದ್ದಾರೆ.
ಡಿಕೆಶಿ-ಸಿದ್ದು ಮೌನ…ಮೌನ…
ನಾಳೆ ಮಧ್ಯಾಹ್ನ 1:30 ಕ್ಕೆ ಬಿ.ಆರ್ ಪಾಟೀಲ್, ಮಧ್ಯಾಹ್ನ 2ಕ್ಕೆ ರಾಜು ಕಾಗೆ ಅವರಿಗೆ ಸರ್ಜೇವಾಲ ಭೇಟಿಗಾಗಿ ಸಮಯ ನಿಗದಿ ಪಡಿಸಲಾಗಿದೆ. ಈಗಾಗಲೇ ಪವರ್ ಶೇರಿಂಗ್ ಬಗ್ಗೆ ಹಲವರು ಮಾತನಾಡಿದ್ದಾರೆ. ಸಿಎಂ ಪುತ್ರ, ರಾಜಣ್ಣ ಸೇರಿದಂತೆ ಹಲವರು ಬಹಿರಂಗವಾಗಿ ಮಾತನಾಡಿದ್ದಾರೆ. ಹಲವು ನಾಯಕರು ಸಿದ್ದರಾಮಯ್ಯ ಅವರ ಕುರ್ಚಿ ಭದ್ರ. ಆ ಕುರ್ಚಿ ಯಾವತ್ತೂ ಬದಲಾಗಲ್ಲ ಎಂದಿದ್ದಾರೆ. ಕೆಲವು ಶಾಸಕರ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದಾರೆ. ಹೀಗೆ ಸಿದ್ದು ಹಾಗೂ ಡಿಕೆಶಿ ಬಣಗಳ ಮಧ್ಯೆ ಪವರ್ ಶೇರಿಂಗ್ ವಿಷಯ ಶೀಥಲ ಸಮರಕ್ಕೆ ಕಾರಣವಾಗುತ್ತಿದೆ. ಈ ಗುದ್ದಾಟಗಳ ಮಧ್ಯೆ ಸಿದ್ದು ಹಾಗೂ ಡಿಕೆಶಿ ಮೌನ ವಹಿಸಿದ್ದಾರೆ.
ಇದು ವಿರೋಧ ಪಕ್ಷಗಳಿಗೆ ಮೃಷ್ಟಾನ್ನ ಭೋಜನವಾಗುತ್ತಿದೆ. ಮೊದಲೇ ಅನುದಾನದ ಕೊರತೆಯ ಆರೋಪ ಹೊತ್ತಿರುವ ಕಾಂಗ್ರೆಸ್ ಗೆ ಇದು ದೊಡ್ಡ ತಲೆನೋವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯೆ ಪ್ರವೇಶ ಮಾಡುತ್ತಿದೆ. ಮೂರು ದಿನಗಳ ಕಾಲ ರಾಜ್ಯದಲ್ಲೇ ಉಳಿಯಲಿರುವ ಸುರ್ಜೇವಾಲಾ ಅತೃಪ್ತರ ಸಮಸ್ಯೆ ಆಲಿಸಲಿದ್ದಾರೆ. ಇನ್ನೊಂದೆಡೆ ನಾಯಕರೂ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ.
ಡಿಕೆಶಿ ಡಿಚ್ಚಿ
ಸುರ್ಜೇವಾಲಾ ಭೇಟಿಯ ಹಿಂದೆ ಡಿಕೆಶಿ ಇರಬಹುದಾ? ಎಂಬ ಗುಮಾನಿ ಕೂಡ ಇದೆ. ನಿಮ್ಮ ಸಮಸ್ಯೆಗಳನ್ನು ಬಹಿರಂಗವಾಗಿಯೇ ಮಾತನಾಡಿ ಎಂದು ಡಿಕೆಶಿ ಸೂಚಿಸಿದ್ದಾರೆ ಎನ್ನಲಾಗಿದೆ. ಸುರ್ಜೇವಾಲಾ ರಾಜ್ಯಕ್ಕೆ ಬಂದಾಗ ನಿಮ್ಮ ಸಮಸ್ಯೆ ಬಗ್ಗೆ ನೇರವಾಗಿ ದೂರು ನೀಡಿ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಮನೆಯೊಂದು ಎರಡು ಬಾಗಿಲು ಸೃಷ್ಟಿಯಾಗಿರುವುದನ್ನು ಒಂದೇ ಮನೆ. ಒಂದೇ ಬಾಗಿಲು ಮಾಡಿ, ಒಗ್ಗಟ್ಟು ಪ್ರದರ್ಶಿಸಬೇಕಾಗಿರುವುದು ಹೈಕಮಾಂಡ್ ನ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಎಂಟ್ರಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಯಾವ ಬದಲಾವಣೆ ಆಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.


















