ಬೆಂಗಳೂರು: ಶಾಸಕ ನರೇಂದ್ರ ಸ್ವಾಮಿ ಅವರನ್ನು ಸರ್ಕಾರ ಇತ್ತೀಚೆಗಷ್ಟೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಅವರ ಆಯ್ಕೆ ನಿಯಮ ಬಾಹಿರವಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ.
ಈ ಕುರಿತು ಸಾಮಾಜಿಕ ಹೋರಾಟಗಾರ ನರಸಿಂಹ ಮೂರ್ತಿ, ಸುಧಾ ಹಾಗೂ ಉಮಾಪತಿ ದೂರು ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮ ಮೀರಿ ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಇದು ನಿಯಮ ಬಾಹಿರ ನೇಮಕವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಲು ಸುಪ್ರೀಂ ಕೋರ್ಟ್ ಕೆಲವು ನಿಯಮಗಳನ್ನು ರೂಪಿಸಿದೆ. ಆ ನಿಯಮದಂತೆ ಅಧ್ಯಕ್ಷರಾಗುವವರಿಗೆ ಪರಿಸರ ಅಧ್ಯಯನ ಕಡ್ಡಾಯವಾಗಿರುತ್ತದೆ.
ಅಧ್ಯಕ್ಷರಾಗುವವರು ಪರಿಸರ ಅಧ್ಯಯನ ವಿಚಾರದಲ್ಲಿ ಇಂಜಿನಿಯರಿಂಗ್ ಮಾಡಿರಬೇಕು.ಆದರೆ, ನರೇಂದ್ರ ಸ್ವಾಮಿ ಅವರು ಸಿವಿಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಹೀಗಾಗಿ ನರೇಂದ್ರ ಸ್ವಾಮಿ ಅವರ ನೇಮಕಾತಿಯನ್ನು ಕೂಡಲೇ ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಶಾಸಕರಾಗಿ ವೇತನ ಪಡೆಯುತ್ತಿರುವ ನರೇಂದ್ರಸ್ವಾಮಿ, ಬೋರ್ಡ್ ಅಧ್ಯಕ್ಷರಾಗಿಯೂ ವೇತನ ಪಡೆಯುತ್ತಾರೆ. ಇದು ಕೂಡ ನಿಯಮ ಉಲ್ಲಂಘನೆಯಾಗಲಿದೆ. ಈ ಹಿಂದೆ ಮಾಜಿ ಶಾಸಕ ಡಾ. ಕೆ ಸುಧಾಕರ್, ಲಕ್ಷ್ಮಣ್ ಸೇರಿದಂತೆ ಅನೇಕರು ನಿಯಮ ಬಾಹಿರವಾಗಿ ನೇಮಕವಾಗಿದ್ದರು. ಆನಂತರ ಅವರು ರಾಜೀನಾಮೆ ಕೊಡಬೇಕಾಯಿತು. ಈ ಬಾರಿಯೂ ನಿಯಮ ಬಾಹಿರವಾಗಿ ನರೇಂದ್ರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.