ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಮೂಲದ ಹೆಚ್.ಬಿ. ಮಂಜುನಾಥ್ ಅವರಿಗೆ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ ಘಟನೆ ನಡೆದಿದೆ.
ಲೋಕಾಯುಕ್ತ ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅದು “ಸತ್ತಿದೆ” ಎಂದು ಆರೋಪಿಸಿ ಮಂಜುನಾಥ್ ಪತ್ರ ಬರೆದಿದ್ದನು. ಜೊತೆಗೆ ಪ್ರತಿದಿನ ಕಚೇರಿಗೆ ಅಗರಬತ್ತಿ ಕಳುಹಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದನು. ಈ ಸಂಬಂಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡು ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಾನೆ ಎಂಬ ಆರೋಪವೂ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಮಂಜುನಾಥ್ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಮಾರ್ಚ್ 13ರಂದು ವಿಚಾರಣೆಗೆ ಹಾಜರಾದ ಮಂಜುನಾಥ್, ತಾನು ನೀಡಿದ ಹೇಳಿಕೆಗಳು ಹಾಗೂ ಪತ್ರದಲ್ಲಿನ ಆರೋಪಗಳು ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ.
ಮಾಹಿತಿ ಹಕ್ಕು (RTI) ಕಾಯ್ದೆಯಡಿ ದೊರೆತ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆವೇಶದಲ್ಲಿ ಪತ್ರ ಬರೆದಿರುವುದಾಗಿ ಲೋಕಾಯುಕ್ತರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ನಡವಳಿಕೆಗೆ ವಿಷಾದ ವ್ಯಕ್ತಪಡಿಸಿ ಲಿಖಿತವಾಗಿ ಕ್ಷಮೆಯಾಚಿಸಿದ್ದಾನೆ.
ದೂರುದಾರರು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೈಗೊಳ್ಳಲಾಗಿದ್ದ ಕಾನೂನು ಕ್ರಮವನ್ನು ಲೋಕಾಯುಕ್ತರು ಕೈಬಿಟ್ಟಿದ್ದಾರೆ. ಅಲ್ಲದೆ ಸುಳ್ಳು ಮಾಹಿತಿ ಪ್ರಕಟಿಸಿದ ಪತ್ರಿಕಾ ಸಂಪಾದಕರಿಗೆ ವಾಸ್ತವಾಂಶ ತಿಳಿಸುವಂತೆ ಲೋಕಾಯುಕ್ತ ನಿಬಂಧಕರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಇಂದಿರಾ ಕ್ಯಾಟೀನ್‌ಗೆ ಗ್ಯಾಸ್ ಪೂರೈಕೆ ಮಾಡಲು ಗ್ರೀನ್ ಸಿಗ್ನಲ್



















