‘ಧರ್ಮಸ್ಥಳದ ಮೃತದೇಹಗಳನ್ನು ಹೂತುಹಾಕಿದ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಹೇಳಿಕೆಯಿಂದ ಅಚ್ಚರಿಯಾಗಿದೆ’ ಎಂದು ಸಾಕ್ಷಿದಾರ ವ್ಯಕ್ತಿಯ ಪರ ವಕೀಲರೆಂದು ಹೇಳಿಕೊಂಡ ಧೀರಜ್ ಎಸ್.ಜೆ ಮತ್ತು ಅನನ್ಯಾಗೌಡ ತಿಳಿಸಿದ್ದಾರೆ.
ನಾವು ಈಗ ಆತನ ಜೊತೆಗೆ ಇದ್ದು, ನಮ್ಮ ಸಹೋದ್ಯೋಗಿಗಳಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರಿಂದ ಹೊಣೆ ವಹಿಸಿಕೊಂಡಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ದೂರುದಾರ ವ್ಯಕ್ತಿ ಮೊದಲು ಪೊಲೀಸರನ್ನಾಗಲೀ ಅಥವಾ ಜಿಲ್ಲಾ ಪೊಲೀಸ್ ವರಿಷ್ಠರನ್ನಾಗಲಿ ಏಕೆ ಸಂಪರ್ಕಿಸಿಲ್ಲ ಎಂದರೆ, ಇಲ್ಲಿ ಯಾವುದೇ ಪ್ರಕರಣದ ತನಿಖೆ ಬಾಕಿ ಇರಲಿಲ್ಲ ಅಥವಾ ಮೃತಪಟ್ಟ ವ್ಯಕ್ತಿಗಳ ಅವಶೇಷಗಳಿಗಾಗಿ ಯಾರೂ ಹುಡುಕುತ್ತಿರಲಿಲ್ಲ.
ದೇವರ ಮೇಲಿನ ಭಯ ಹಾಗೂ ಆತ್ಮಸಾಕ್ಷಿಯ ಕಾರಣಕ್ಕೆ ದೂರುದಾರ ತಪ್ಪೊಪ್ಪಿಕೊಳ್ಳುವ ಹಾಗೂ ಮಾರ್ಗದರ್ಶನ ಬಯಸುವ ಉದ್ಧೇಶದಿಂದ ವಕೀಲರನ್ನು ಸಂಪರ್ಕಿಸಿದ್ದ. ಇತಿಹಾಸದಲ್ಲಿ ನಡೆದ ಘೋರ ಪ್ರಮಾದಗಳಿಗೆ ಅಂತ್ಯ ಹಾಡುವುದು ಆತನ ಉದ್ದೇಶವಾಗಿತ್ತು. ಈ ಘನ ಉದ್ದೇಶವನ್ನೇ ಪೊಲೀಸರು ಸತತ ನಿರ್ಲಕ್ಷ್ಯ ಮಾಡಿರುವುದು ಅವರ ಹೇಳಿಕೆಯಲ್ಲಿ ಕಂಡು ಬಂದಿದೆ’.
ದೂರು ನೀಡಿದ ವ್ಯಕ್ತಿಯು ಪರಿಶೀಲನೆಗೆ ಒಳಪಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಗುರುತು ಬಹಿರಂಗಪಡಿಸಬಾರದು ಎಂದು ಬಯಸುತ್ತಿಲ್ಲ. ಅದರ ಬದಲು, ಸ್ವತಃ ಮುಂದೆ ಬಂದು ಪರಿಷ್ಕೃತ ದೂರನ್ನು ನೀಡುವಂತೆ ತನ್ನ ವಕೀಲರಿಗೆ ಆತ ಸೂಚಿಸಿದ್ದು, ಎಫ್‌ಐಆರ್ ದಾಖಲಿಸಿದ್ದೆಲ್ಲವನ್ನೂ ಆತ ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದಾನೆ ಎಂದವರು ತಿಳಿಸಿದ್ದಾರೆ.



















