ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ವಿಜಯನಗರ ಬಡಾವಣೆಯ ತಿಲಕ್ ಪಾರ್ಕ್ ಸಮೀಪ ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉದ್ವಿಗ್ನತೆಗೆ ಕಾರಣವಾಗಿದೆ. ಸುಧಾ ಎಂಬುವರ ಮನೆಯ ಮೇಲೆ ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲು ತೂರಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಅವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಲ್ಲು ತೂರುವಾಗ ಕೆಲ ಮುಸ್ಲಿಂ ಯುವಕರನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಹಿಡಿದು ಬಸವನಹಳ್ಳಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸುವಂತೆ ಬಜರಂಗದಳ ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖಂಡರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಮುಸ್ಲಿಂ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಖಂಡರು ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಘಟನೆ ಬಳಿಕ ಒಂದು ಕಡೆ ಬಜರಂಗದಳ ಕಾರ್ಯಕರ್ತರು, ಮತ್ತೊಂದು ಕಡೆ ಮುಸ್ಲಿಂ ಸಮುದಾಯದ ಯುವಕರು ಜಮಾವಣೆಗೊಂಡು ಕೆಲ ಕಾಲ ಬಸವನಹಳ್ಳಿ ಪೊಲೀಸ್ ಠಾಣೆ ಎದುರು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟರು. ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈ ವೇಳೆ ಗಾಯಗೊಂಡ ಅಸ್ಫದ್ ಹಾಗೂ ಹಸೇನ್ ಎಂಬ ಇಬ್ಬರು ಮುಸ್ಲಿಂ ಯುವಕರು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತಮ್ಮ ಮೇಲೆ ಬಜರಂಗದಳ ಮತ್ತು ಬಿಜೆಪಿ ಮುಖಂಡರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆ ಬಳಿಯೂ ನೂರಾರು ಮುಸ್ಲಿಂ ಸಮುದಾಯದ ಯುವಕರು ಜಮಾವಣೆಗೊಂಡಿದ್ದು, ಅಲ್ಲಿ ಕೂಡ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಂಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕಳ್ಳತನ | 1.4 ಲಕ್ಷ ರೂ. ನಗದು, 9 ಗ್ರಾಂ ಚಿನ್ನಾಭರಣ ದೋಚಿದ ಖದೀಮರು



















