ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ಗೆದ್ದಿರುವ ಭಾರತದ ಪ್ರತಿಭಾವಂತ ಬಾಕ್ಸರ್ ಮನೋಜ್ ಕುಮಾರ್(Boxer Manoj kumar) ನಿವೃತ್ತಿ ಪ್ರಕಟಿಸಿದ್ದಾರೆ. ವೆಲ್ಟರ್‌ವೇಟ್ (64 ಕೆ.ಜಿ) ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದ್ದ ಮನೋಜ್ ಇದೀಗ ವೃತ್ತಿಪರ ಬಾಕ್ಸಿಂಗ್‌ನಿಂದ ಹೊರಕ್ಕೆ ಬಂದಿದ್ದಾರೆ. ಆದರೆ ಅವರು ಬಾಕ್ಸಿಂಗ್ ಕ್ಷೇತ್ರದಿಂದ ವಿಮಖರಾಗಿಲ್ಲ. ಅವರು ಯುವ ಬಾಕ್ಸರ್‌ಗಳಿಗೆ ತರಬೇತಿ ನೀಡುವ ವೃತ್ತಿಯನ್ನು ಮುಂದುವರಿಸಲಿದ್ದಾರೆ.
39 ವರ್ಷದ ಮನೋಜ್ ಕುಮಾರ್, 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಮತ್ತು 2018ರ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಏಷ್ಯನ್ ಚಾಂಪಿಯನ್‌ಷಿಪ್ಸ್‌ನಲ್ಲಿ ಅವರು ಎರಡು ಬಾರಿ ಕಂಚು ಗೆದ್ದು ಮಿಂಚಿದ್ದರು.
2012ರ ಲಂಡನ್ ಒಲಿಂಪಿಕ್ಸ್ ಮತ್ತು 2016ರ ರಿಯೋ ಒಲಿಂಪಿಕ್ಸ್‌ಗಳಲ್ಲೂ(Rio Olympics) ಸ್ಪರ್ಧಿಸಿ ಎರಡೂ ಕ್ರೀಡಾಕೂಟಗಳಲ್ಲಿ ಪ್ರಿಕ್ವಾರ್ಟರ್‌ಫೈನಲ್ ಹಂತವನ್ನು ತಲುಪಿ ನಿರ್ಗಮಿಸಿದ್ದರು. 2018ರ ಬಳಿಕ, ಗಾಯಗಳು ಮತ್ತು ಆಯ್ಕೆ ಸಂಬಂಧಿ ವಿವಾದಗಳಿಂದಾಗಿ ಅವರಿಗೆ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.
40 ವರ್ಷ ದಾಟಿದ ಬಳಿಕ ಅಂತಾರಾಷ್ಟ್ರೀಯ ನಿಯಮದಂತೆ ಅಮೆಚೂರ್ ಕೂಟಗಳಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ. ಹೀಗಾಗಿ ನಾನು, ನನ್ನ ನೆಚ್ಚಿನ ಬಾಕ್ಸಿಂಗ್ ಕ್ರೀಡೆಯಿಂದ ನಿವೃತ್ತಿಯಾಗುತ್ತಿದ್ದೇನೆ. ಆದರೆ ಬಾಕ್ಸಿಂಗ್ ತರಬೇತಿ ಮುಂದುವರಿಸುತ್ತೇನೆ ಎಂದು ಮನೋಜ್ ಹೇಳಿದರು. ಸಹೋದರ ಮತ್ತು ಕೋಚ್ ನೆರವಿನಿಂದ ಮನೋಜ್ ಕುರುಕ್ಷೇತ್ರದಲ್ಲಿ ಬಾಕ್ಸಿಂಗ್ ಅಕಾಡೆಮಿಯೊಂದನ್ನು ಸ್ಥಾಪಿಸಿದ್ದಾರೆ.