ಬೆಂಗಳೂರು: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಹಾಗಾಗಿ, ತೆರಿಗೆದಾರರು, ಸಂಬಳದಾರರು, ಉದ್ಯಮಿಗಳು ಐಟಿಆರ್ ಸಲ್ಲಿಕೆಯಲ್ಲಿ ನಿರತರಾಗಿದ್ದಾರೆ. ಬಹುತೇಕ ಮಂದಿ ಅವಸರದಲ್ಲಿ ಐಟಿಆರ್ ಸಲ್ಲಿಸುತ್ತಾರೆ. ಇದೇ ವೇಳೆ ಕೆಲವು ತಪ್ಪುಗಳಾಗುವ ಸಾಧ್ಯತೆಗಳಿರುತ್ತವೆ. ಐಟಿಆರ್ ಸಲ್ಲಿಸುವಾಗ ತಪ್ಪುಗಳಾದರೆ ದಂಡ ವಿಧಿಸಲಾಗುತ್ತದೆ. ಅನಗತ್ಯ ಕಿರಿಕಿರಿಗಳು ಆಗುತ್ತವೆ. ಇವುಗಳನ್ನು ತಪ್ಪಿಸಲು ಈ ಕೆಳಗಿನ ತಪ್ಪುಗಳನ್ನು ಮಾಡಬಾರದು.
ಸರಿಯಾದ ಫಾರ್ಮ್ ಆಯ್ಕೆ ಮಾಡಿಕೊಳ್ಳಿ
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಐಟಿಆರ್ ಫಾರ್ಮ್ ಗಳು ಇರುತ್ತವೆ. ಅದರಲ್ಲೂ, ಸಂಬಳದಾರರು, ವೃತ್ತಿಪರರು ಮತ್ತು ಉದ್ಯಮಿಗಳಿಗೆ ವಿಭಿನ್ನ ಫಾರ್ಮ್ಗಳು ಅನ್ವಯಿಸುತ್ತವೆ. ಹಾಗಾಗಿ, ಸರಿಯಾದ ಫಾರ್ಮ್ ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ತಪ್ಪಾದ ಫಾರ್ಮ್ ಸಲ್ಲಿಸುವುದರಿಂದ ರಿಟರ್ನ್ ತಿರಸ್ಕೃತಗೊಳ್ಳಬಹುದು ಎಂಬುದು ತಿಳಿದಿರಲಿ.
ಮಾಹಿತಿ ಸ್ಪಷ್ಟವಾಗಿರಲಿ
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯ ವಿವರಗಳಲ್ಲಿನ ಸಣ್ಣ ತಪ್ಪುಗಳು ಮಾಡಬಾರದು. ತಪ್ಪಾದ ಐಎಫ್ಎಸ್ ಸಿ ಕೋಡ್ ನಮೂದಿಸುವುದರಿಂದ ಮರುಪಾವತಿ ವಿಳಂಬವಾಗಬಹುದು.
ಕ್ಲೇಮ್ ಸರಿಯಾಗಿರಲಿ
ಐಟಿಆರ್ ಸಲ್ಲಿಸುವವರು ಸೆಕ್ಷನ್ 80ಸಿ, 80ಡಿ, ಅಥವಾ ಎಚ್ ಆರ್ ಎ ಅಡಿಯಲ್ಲಿ ಅರ್ಹ ಕಡಿತಗಳನ್ನು ಕ್ಲೇಮ್ ಮಾಡಲು ಮರೆತುಬಿಡಬಹುದು. ಕೆಲವರು ಪುರಾವೆ ಇಲ್ಲದೆ ಕಡಿತಗಳನ್ನು ಹೆಚ್ಚಿಸಿ ತೋರಿಸುತ್ತಾರೆ. ಆದರೆ, ಐಟಿಆರ್ ಸಲ್ಲಿಸಿದ ಬಳಿಕ ಇದರಿಂದ ತೊಂದರೆಯಾಗುತ್ತದೆ.
ಹಣಕಾಸು ವರ್ಷ ನೆನಪಿರಲಿ
2024-25ರ ಆರ್ಥಿಕ ವರ್ಷಕ್ಕೆ ಸರಿಯಾದ ಮೌಲ್ಯಮಾಪನ ವರ್ಷ ಅಥವಾ ಅಸೆಸ್ ಮೆಂಟ್ ಇಯರ್ 2025-26 ಆಗಿದೆ. ಅಂದರೆ ನೀವೀಗ 2024-25ನೇ ಸಾಲಿನ ಐಟಿಆರ್ ಸಲ್ಲಿಸುತ್ತಿದ್ದಾರೆ. ಒಂದು ವೇಳೆ, ತಪ್ಪಾದ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸುವುದರಿಂದ ಡಬಲ್ ತೆರಿಗೆ ಮತ್ತು ಅನಗತ್ಯ ದಂಡಗಳು ಎದುರಾಗಬಹುದು.