ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣಗಳ ಸಂಪೂರ್ಣ ತನಿಖೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿ ಆದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆ ನಡೆಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಪಟ್ಟು ಬಿದ್ದಿದ್ದು,ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶಿಸಿದೆ.
ಕೋವಿಡ್ ಕಾಲಘಟ್ಟದಲ್ಲಿ ವ್ಯಾಕ್ಸಿನ್, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭಾರಿ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ೨೮ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಪಾಲಿಕೆಯ ಇಂಜಿನಿಯರ್. ವೈದ್ಯರು ಅಕೌಂಟ್ ವಿಭಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ನೋಟಿಸ್ ಗೆ ಉತ್ತರ ನೀಡುವಂತೆ ಹೇಳಲಾಗಿದೆ.
ಇತ್ತ ನೋಟಿಸ್ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಉತ್ತರಿಸಿದ್ದು, ಅಧಿಕಾರಿಗಳು ಕೊಟ್ಟ ಉತ್ತರ ಪರಿಶೀಲನೆ ನಡೆಸಿ 19 ಅಧಿಕಾರಿಗಳ ಕ್ಲಿನ್ ಚಿಟ್ ನೀಡಲಾಗಿದೆ. ಉಳಿದ 9 ಅಧಿಕಾರಿಗಳಿಗೆ ಇಲಾಖೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಆ ಅವಧಿಯ ಪಾಲಿಕೆಯ ಸಿಎಚ್ಓ, ಅಕೌಂಟ್ ವಿಭಾಗದ ನೌಕರರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಮಾತ್ರವಲ್ಲದೇ, ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಸಲಕರಣೆ ರವಾನೆ ಮಾಡಿದ ಖಾಸಗಿ ಕಂಪೆನಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.



















