ಹೊಸದಿಲ್ಲಿ: ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಜಾರಿಗೆ ಸರ್ಕಾರದ ಬದ್ಧತೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಪುನರುಚ್ಚರಿಸಿದರು. ತಮಿಳುನಾಡಿನಲ್ಲಿ ಎನ್‌ಇಪಿ ಹಾಗೂ ತ್ರಿ ಭಾಷಾ ಸೂತ್ರದ ಬಗ್ಗೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯ ನಡುವೆಯೇ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನ ಕೆಲ ನಾಯಕರ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನ್, “ತಮಿಳುನಾಡಿನ ಕೆಲವು ಸ್ನೇಹಿತರು ಎನ್‌ಇಪಿ ಮತ್ತು ತ್ರಿ ಭಾಷಾ ನೀತಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ಎಂದಿಗೂ ಹಿಂದಿ ಅಥವಾ ಯಾವುದೇ ಭಾಷೆಯನ್ನು ಯಾವುದೇ ರಾಜ್ಯದ ಮೇಲೆ ಹೇರಲಿಲ್ಲ. ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೆ ಬದ್ಧವಾಗಿದೆ. ಆದರೆ ಕೆಲವು ನಿಯಮಗಳು ಅನ್ವಯಿಸುತ್ತವೆ.” ಎಂದು ಹೇಳಿದರು.
“ತ್ರಿ ಭಾಷಾ ನೀತಿ ಸ್ವೀಕರಿಸುವವರೆಗೆ ರಾಜ್ಯದ ಶಿಕ್ಷಣ ಇಲಾಖೆಗೆ ಅನುದಾನ ನಿಲ್ಲಿಸುವ ಮೂಲಕ ಕೇಂದ್ರ ಸರ್ಕಾರ ಬ್ಲಾಕ್‌ಮೇಲ್ ಮಾಡುತ್ತಿದೆ” ಎಂದು ತಮಿಳುನಾಡು ಸಿಎಂ ಆರೋಪಿಸಿದ್ದರು. ತಮ್ಮ ಸರ್ಕಾರ ಈ ದಬ್ಬಾಳಿಕೆಗೆ ತಲೆಬಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಯಾಗಿ ಪ್ರಧಾನ್, ಎನ್‌ಇಪಿಯನ್ನು ಹೊಸ ಆಶಯಗಳ ಸಾಮಾನ್ಯ ವೇದಿಕೆ ಎಂದು ವರ್ಣಿಸಿದರು. ಎಲ್ಲಾ ಭಾಷೆಗಳ ಗೌರವವನ್ನು ಕಾಪಾಡುವುದು ಮುಖ್ಯ ಎಂದರು. “ಎನ್‌ಇಪಿ ಜಾರಿಗೆ ಪ್ರಧಾನಿ ಮೋದಿ ಅವರ ಮಾತೃಭಾಷೆಯ ಶಿಕ್ಷಣದ ದೃಷ್ಟಿಕೋನಕ್ಕೆ ಪೂರಕವಾಗಿದೆ. ತಮಿಳು ನಮ್ಮ ಸಂಸ್ಕೃತಿಯ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದ್ದು, ಅದಕ್ಕೆ ನಾವು ಗೌರವ ನೀಡುತ್ತೇವೆ ” ಎಂದರು.
ಎನ್‌ಇಪಿ ಮತ್ತು ಮೂರು ಭಾಷಾ ಸೂತ್ರದ ಬಗ್ಗೆ ನಡೆಯುತ್ತಿರುವ ಚರ್ಚೆ ಪ್ರಾದೇಶಿಕ ಭಾಷೆಗಳು, ಸಾಂಸ್ಕೃತಿಕ ಗುರುತಿನ ಬಗ್ಗೆ ಸಮಗ್ರ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಕೇಂದ್ರ ಸರ್ಕಾರ ತನ್ನ ನೀತಿಯ ಬಗ್ಗೆ ದೃಢನಿಲುವನ್ನು ತಾಳಿದ್ದರೂ, ತಮಿಳುನಾಡಿನ ಪ್ರತಿಸ್ಪಂದನೆ ಭಾಷಾ ಹೇರಿಕೆ ಮತ್ತು ಪ್ರಾದೇಶಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಸ್ತೃತ ಆತಂಕಗಳನ್ನು ಪ್ರತಿಬಿಂಬಿಸುತ್ತದೆ.