ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೆ ಕಮಿಷನ್ ದಂಧೆ ಬೆಳಕಿಗೆ ಬಂದಿದ್ದು, ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ಅಧಿಕಾರಿ ಮಾತ್ರ ದರ್ಪದಿಂದ ಲಂಚ ಕೇಳ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಸರ್ಕಾರದ ಅಧಿಕಾರಿ ಮೇಲೆ ಈಗ ಕಮಿಷನ್ ಅರೋಪ ಕೇಳಿ ಬಂದಿದೆ. ಅಧಿಕಾರಿಗೆ ಬಾಕಿ ಬಿಲ್ ಪೇಮೆಂಟ್ ಕ್ಲಿಯರ್ ಮಾಡೋಕೆ 15 ಪರ್ಸೆಂಟ್ ಕಮಿಷನ್ ಕೊಡಬೇಕಂತೆ. ಬಿಬಿಎಂಪಿಯ ಅರಣ್ಯ ವಿಭಾಗದ ಮುಖ್ಯಸ್ಥರ ಮೇಲೆ ಇಂತಹ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಬಿಬಿಎಂಪಿಯ ಅರಣ್ಯ ವಿಭಾಗದ ಮುಖ್ಯಸ್ಥ ಸ್ವಾಮಿ ಮೇಲೆ ಈ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ನಗರದಲ್ಲಿ ಮಳೆಯಿಂದ ಮರಗಳು, ಕೊಂಬೆಗಳು ಧರೆಗೆ ಉರುಳಿದ್ದವು. ಮರ ಹಾಗೂ ಕೊಂಬೆಗಳ ತೆರವಿಗೆ ಟೆಂಡರ್ ಕರೆದು ಕಾರ್ಯಾದೇಶ ಪತ್ರ ನೀಡಲಾಗಿತ್ತು. ಗುತ್ತಿಗೆದಾರ ಬಿದ್ದ ಮರ ಹಾಗೂ ಕೊಂಬೆಗಳನ್ನು ತೆರವು ಮಾಡಿದ್ದರು.
ಆದರೆ, ಗುತ್ತಿಗೆದಾರ ಬಿಲ್ ಕೇಳಲು ಹೋದರೆ, ಪರ್ಸೆಂಟೇಜ್ ಕೇಳುತ್ತಿದ್ದಾರಂತೆ. ಕೆಲಸ ಮಾಡಿ ಬಿಲ್ ಕೇಳಿದರೂ ಧಮ್ಕಿ ಹಾಕುತ್ತಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ದೂರು ನೀಡಿದ್ದೇನೆ. ಡಿಕೆಶಿ ಅವರು ಬಿಬಿಎಂಪಿ ಮುಖ್ಯ ಅಯುಕ್ತರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಆದರೂ ಅರಣ್ಯ ವಿಭಾಗದ ಮುಖ್ಯಸ್ಥ ಸ್ವಾಮಿ ಲಂಚ ಕೊಡುವವರೆಗೆ ಬಿಲ್ ಪಾಸ್ ಅಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾದರೆ ನಾವು ಬದುಕುವುದು ಕಷ್ಟ. ಕೇವಲ 18 ಲಕ್ಷ ರೂ. ಬಿಲ್ ಗೆ 15 ಪರ್ಸೆಂಟೇಜ್ ಲಂಚ ಕೇಳ್ತಿದ್ದಾರೆ. ಕಮಿಷನ್ ಕೊಟ್ಟಿಲ್ಲ ಅಂದರೆ, ಬಿಲ್ ಕೊಡುವುದಿಲ್ಲ ಅಂತಾ ಹೇಳ್ತಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸಿದ್ದಾರೆ. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಕಮಿಷನ್ ದಂಧೆ ನಿಂತಿಲ್ಲವಾ? ಗುತ್ತಿಗೆದಾರರ ಹಣ ಬಿಡುಗಡೆಗೆ ಪರ್ಸೆಂಟೇಜ್ ಕೊಡಲೇಬೇಕಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.