ನವದೆಹಲಿ : ಮದ್ಯಾಪ್ರಾಚ್ಯ ಯುದ್ದದ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಇದರ ನೇರ ಪರಿಣಾಮ ಭಾರತದಲ್ಲಿಯೂ ಕಂಡುಬಂದಿದೆ. ಇಂದಿನಿಂದ (ಏಪ್ರಿಲ್ 1) ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 195.50 ರೂ. ಹೆಚ್ಚಳ ಮಾಡಲಾಗಿದೆ. ಈ ನಿರ್ಧಾರದಿಂದ ಈಗಾಗಲೇ ಸಿಲಿಂಡರ್ ಕೊರತೆಯಿಂದ ಸಂಕಷ್ಟದಲ್ಲಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳಿಗೆ ಮತ್ತೊಂದು ಹೊರೆ ಹೆಚ್ಚಾಗಿದೆ.
ಈ ಮೊದಲು ಮಾರ್ಚ್ 1ರಂದು 19 ಕೆ.ಜಿ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 114.5 ರೂ. ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ದರ ಹೆಚ್ಚಳವಾಗಿರುವುದು ವ್ಯಾಪಾರಿಗಳಿಗೆ ದೊಡ್ಡ ಆಘಾತ ತಂದಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಬೆಲೆಗಳು ಸುಮಾರು 50 ಶೇಕಡಾ ಏರಿಕೆಯಾಗಿದೆ ಎಂದು ವರದಿಗಳು ಸೂಚಿಸುತ್ತವೆ.
ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಬೆಲೆ ಹಾಗೂ ವಿನಿಮಯ ದರಗಳ ಆಧಾರದ ಮೇಲೆ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು LPG ಮತ್ತು ATF ದರಗಳನ್ನು ಪರಿಷ್ಕರಿಸುತ್ತವೆ. ಅದೇ ಕ್ರಮದಂತೆ ಇಂದಿನ ದರ ಏರಿಕೆಯೂ ಜಾರಿಗೆ ಬಂದಿದೆ.
ಹೊಸ ದರಗಳ ಪ್ರಕಾರ, ದೆಹಲಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2078.50 ರೂ., ಕೊಲ್ಕತ್ತಾದಲ್ಲಿ 2208.00 ರೂ., ಮುಂಬೈಯಲ್ಲಿ 2031.00 ರೂ. ಮತ್ತು ಚೆನ್ನೈನಲ್ಲಿ 2246.50 ರೂ. ಆಗಿದೆ. ಇದೀಗ ಗೃಹ ಬಳಕೆಯ LPG ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಾರ್ಚ್ 7ರಂದು 14.2 ಕೆ.ಜಿ. ಸಿಲಿಂಡರ್ ದರ 60 ರೂ. ಏರಿಕೆಯಾದ ನಂತರ ಅದೇ ದರ ಮುಂದುವರಿದಿದೆ.
ಇದರ ನಡುವೆ ಹೋರ್ಮುಜ್ ಸಮುದ್ರ ಮಾರ್ಗದಲ್ಲಿ ಉಂಟಾದ ತೊಂದರೆಗಳು ಜಾಗತಿಕ ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ವಿಶ್ವದ ಪ್ರಮುಖ ತೈಲ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದರಿಂದ ಜಾಗತಿಕ ಇಂಧನ ಸರಬರಾಜು ಸರಪಳಿ ಮೇಲೆ ದೊಡ್ಡ ಪರಿಣಾಮ ಬಿದ್ದಿದೆ.


















