ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಖ್ಯಾತ ಹಾಸ್ಯ ನಟ ಎಂ.ಎಸ್ ಉಮೇಶ್(80) ಅವರು ಇಂದು (ಭಾನುವಾರ) ಇಹಲೋಕ ತ್ಯಜಿಸಿದ್ದಾರೆ. ಸುದೀರ್ಘ 6 ದಶಕದ ತಮ್ಮ ಸಿನಿಪಯಾಣವನ್ನು ಮುಗಿಸಿದ್ದಾರೆ. ಕೆಲದಿನಗಳಿಂದ ಕ್ಯಾನ್ಸ್‌ರ್‌ನಿಂದ ಬಳುತ್ತಿದ್ದವರುಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೈಸೂರು ಶ್ರೀಕಂಠಯ್ಯ ಉಮೇಶ್ ಕನ್ನಡ ಚಿತ್ರರಂಗದ ಪ್ರಖ್ಯಾತ ಹಾಸ್ಯನಟ, ನಿರ್ದೇಶಕ ಮತ್ತು ನಿರ್ಮಾಪಕ. ಸುಮಾರು 6 ದಶಕಗಳ ತಮ್ಮ ಸಿನಿಪಯಣದಲ್ಲಿ ನಾನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು.
ಎಂ.ಎಸ್.ಉಮೇಶ್ ಜನನ
1945 ರಲ್ಲಿ ಮೈಸೂರಿನಲ್ಲಿ ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿಯ ಮಗನಾಗಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿಯೆಡೆಗೆ ಆಕರ್ಷಿತರಾಗಿದ್ದರು. ಬಾಲನಟನಾಗಿ ಕೇವಲ ನಾಲ್ಕು ವರ್ಷದವರಿದ್ದಾಗಲೇ ರಂಗಭೂಮಿ ಸೇರಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚತೊಡಗಿದರು. ಮಾಸ್ಟರ್ ಹಿರಣ್ಣಯ್ಯ ಮತ್ತು ಗುಬ್ಬಿ ಕಂಪನಿಗಳಲ್ಲಿ ಬಾಲನಟನಾಗಿದ್ದಲೇ ಇವರ ನಟನೆ ನೋಡಿದ ಪುಟ್ಟಣ್ಣ ಕಣಗಾಲ್ ಬಿ.ಆರ್.ಪಂತಲುರವರ ಚಿತ್ರ `ಮಕ್ಕಳ ರಾಜ್ಯ’ದಲ್ಲಿ ಅವಕಾಶ ನೀಡಲು ಶಿಫಾರಸು ಮಾಡಿದರು.

ರಂಗಭೂಮಿ ಪ್ರವೇಶ
ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ಅ.ನ.ಕೃ. ರವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರ ಉಮೇಶ್ ಅವರಿಗೆ ಬುದ್ಧಿ ಬಂದ ನಂತರದ ಮೊದಲ ಅನುಭವದ ಪಾತ್ರ. ಇದಕ್ಕೆ ಮೊದಲೇ ಅವರು ಹಲವಾರು ನಾಟಕಗಳಲ್ಲಿ ಬಾಲನಟನ ಪಾತ್ರವಹಿಸಿದ್ದರು. ಗುಬ್ಬಿ ವೀರಣ್ಣನವರ ಕಂಪನಿಯಲ್ಲೂ ಅವರಿಗೆ ಬಾಲನಟನ ಪಾತ್ರಗಳು ದೊರಕಿದವು. ದಶಾವತಾರ ನಾಟಕದಲ್ಲಿ ಇವರ ಪ್ರಹ್ಲಾದನ ಪಾತ್ರದ ಅಭಿನಯವನ್ನು ಮೆಚ್ಚಿದ ಮಾಸ್ತಿಯವರು ಹತ್ತು ರೂಪಾಯಿ ಸಂಭಾವನೆ ನೀಡಿದ್ದರು. ಗುಬ್ಬಿ ವೀರಣ್ಣನವರು ಇವರು ಬಾಲ್ಯದಲ್ಲಿದ್ದಾಗ ರಂಗ ಶಿಕ್ಷಣ ಕೊಡುತ್ತ ಅಭಿನಯವನ್ನು ಕಲಿಸಿದ ಗುರುಗಳು.

ಇವರಿಗೆ ಹೆಸರು ತಂದು ಕೊಟ್ಟಿದ್ದು 1977 ರಲ್ಲಿ ತೆರೆಕಂಡ ಕಣಗಾಲ್‌ರ ಚಿತ್ರ ಸಂಕಲನ `ಕಥಾಸಂಗಮ’. ಈ ಚಿತ್ರದ ನಟನೆಗಾಗಿ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಇಲ್ಲಿಂದ ಉಮೇಶ್‌ರವರಿಗೆ ಅವಕಾಶಗಳು ಮಹಾಪೂರವೇ ಬಂದಿತು. ಅನಂತನಾಗ ಮುಖ್ಯಭೂಮಿಕೆಯಲ್ಲಿದ್ದ `ಗೋಲ್‌ಮಾಲ್ ರಾಧಾಕೃಷ್ಣ’ ಚಿತ್ರದ ಸೀತಾಪತಿ ಪಾತ್ರ ತುಂಬಾ ಜನಪ್ರಿಯತೆ ತಂದುಕೊಟ್ಟಿತು. ಈ ಚಿತ್ರದ `ಅಪಾರ್ಥ ಮಾಡಕ್ಕೋಬೇಡಿ’ ದೃಶ್ಯ ಕನ್ನಡದ ಎವರಗ್ರೀನ್ ಕಾಮಿಡಿ ದೃಶ್ಯಗಳೊಲ್ಲಂದು.
ಹಿರಿಯ ನಟಯೊಂದಿಗಿನ ಒಡನಾಟ
ಉಮೇಶ್ ಎಂದರೆ ಹಿರಿಯ ನಟರಿಗೂ ಗೌರವ. ರಾಜಕುಮಾರ್ ಅವರ ಕಟ್ಟ ಕಡೆಯ ಚಿತ್ರಗಳವರೆಗೆ ಬಹುತೇಕ ಚಿತ್ರಗಳಲ್ಲಿ ಉಮೇಶ್ ನಟಿಸಿದ್ದರು. ಒಮ್ಮೆ ಉಮೇಶರ ಹುಟ್ಟು ಹಬ್ಬ ಎಂದು ಅರಿತ ವಿಷ್ಣುವರ್ಧನ್ ಅವರು ಸಿನಿಮಾ ಸೆಟ್ಟಿನಲ್ಲೇ ಅವರ ಹುಟ್ಟುಹಬ್ಬ ಆಚರಿಸುವ ಏರ್ಪಾಡು ಮಾಡಿ ಈ ನಟನಿಗೆ ಗೌರವ ಸಲ್ಲುವಂತೆ ನಡೆದುಕೊಂಡರು. ʻಅಂದಿನ ಕಪ್ಪು ಬಿಳುಪು ಜಗತ್ತಿನಿಂದ ಇಲ್ಲಿಯವರೆಗಿನ ಕನ್ನಡ ಚಿತ್ರರಂಗದ ಯಾತ್ರೆ ಅದ್ಬುತ. ಈ ಯಶಸ್ಸಿನ ಹಾದಿಯನ್ನು ನೋಡಿರುವ ನಾನೇ ಪುಣ್ಯವಂತʼ ಎಂಬುದು ಉಮೇಶರ ಮಾತು.

ಆರು ದಶಕಗಳ ಕಾಲ ವೃತ್ತಿಜೀವನವನ್ನು ಹೊಂದಿರುವ ಕನ್ನಡ ಸಿನಿಮಾ ನಟರಾಗಿದ್ದಾರೆ. ಅವರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಉಮೇಶ್ ತಮ್ಮ ವಿಶಿಷ್ಟ ಸಂಭಾಷಣೆ, ಮುಖಭಾವ ಮತ್ತು ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ.
ಅಂಕಣ ಬರಹ ಮತ್ತು ನಾಟಕಗಳು
ಉಮೇಶರು ಹಲವಾರು ಪತ್ರಿಕೆಗಳ ಅಂಕಣ ಬರಹಗಾರರೂ ಹೌದು. ಅಮ್ಮಾವರ ಆಜ್ಞೆ, ಎಲ್ಲರೂ ನಮ್ಮವರೇ ಉಮೇಶರು ರಚಿಸಿದ ನಾಟಕಗಳು. ಕಿರುತೆರೆಗೆ ಬರೆದು ನಿರ್ದೇಶಿಸಿದ್ದು `ನಮ್ಮೂರಲ್ಲೊಂದು ನಾಟಕ’, `ಸಮಸ್ಯೆಯ ಸರಮಾಲೆ’, `ರಿಜಿಸ್ಟರ್ ಫೋಸ್ಟ್’, `ಅಂಚು-ಸಂಚು’, `ಗೌಡತಿ ಗೌರಮ್ಮ’, `ಸಂಸಾರದಲ್ಲಿ SOMEಕ್ರಾಂತಿ’, `ಜೋಕ್ಸ್‌ಫಾಲ್ಸ್’`, `ಗಲಿಬಿಲಿ ಸಂಸಾರ’ ಮುಂತಾದ ನಾಟಕಗಳಿಂದ ಜನಮನ ಗೆದ್ದಿದ್ದರು.
ಸಂದ ಪ್ರಶಸ್ತಿ

ʼಕಥಾಸಂಗಮದʼ ಎಂಬ ಮೂರು ಕಥಾನಕಗಳ ಚಿತ್ರವಾದ ಮುನಿತಾಯಿಯಲ್ಲಿ ‘ತಿಮ್ಮರಾಯಿ’ ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ, 1994ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, 1997ರಲ್ಲಿ ಮಹಾನಗರ ಪಾಲಿಕೆ ಪ್ರಶಸ್ತಿ. ಆತ್ಮಚರಿತ್ರೆ ‘ಬಣ್ಣದ ಘಂಟೆ’ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಉಮೇಶರನ್ನ ಅರಸಿಬಂದಿವೆ. ಉಮೇಶರ 5 ದಶಕಗಳ ಚಿತ್ರರಂಗದಲ್ಲಿನ ಕಾಯಕವನ್ನು ಚಿತ್ರರಂಗವು ಗೌರವಿಸಿತು.
ಇದನ್ನೂ ಓದಿ: ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು | ಹಾಸ್ಯನಟ ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು



















