ಲಖನೌ: ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಕಂಡು, ಅವರು ದಾರಿ ತಪ್ಪಿದರೆ ತಿದ್ದಿ, ಅವರ ಭವಿಷ್ಯವನ್ನು ಉಜ್ವಲಗೊಳಿಸುವವನೇ ಶಿಕ್ಷಕ ಅಥವಾ ಗುರು. ಆದರೆ, ಉತ್ತರ ಪ್ರದೇಶದಲ್ಲಿ ಕಾಲೇಜು ಪ್ರೊಫೆಸರ್ ಒಬ್ಬನು ಕಳೆದ 20 ವರ್ಷಗಳಿಂದ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಂತಹ ಕ್ರೂರ ಕಾಲೇಜು ಪ್ರೊಫೆಸರ್ ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಹೌದು, ಉತ್ತರ ಪ್ರದೇಶದ ಹತ್ರಾಸ್ ನಲ್ಲಿರುವ ಸೇಠ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಪ್ರೊಫೆಸರ್ ಆಗಿರುವ ರಜನೀಶ್ ಕುಮಾರ್ ಎಂಬಾತನು ನೀಚ ಕೆಲಸ ಮಾಡಿ ಈಗ ಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ. ಈತನು ವಿದ್ಯಾರ್ಥಿನಿಯರಿಗೆ ಅಂಕಗಳ ಬೆದರಿಕೆ ಹಾಕಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಚಾಳಿ ಹೊಂದಿದ್ದ ಎಂದು ತಿಳಿದುಬಂದಿದೆ.
ಸುಮಾರು 50 ವರ್ಷದ ರಜನೀಶ್ ಕುಮಾರ್, ಕಳೆದ 20 ವರ್ಷಗಳಿಂದಲೂ ಇಂತಹದ್ದೇ ನೀಚ ಕೃತ್ಯವನ್ನು ಎಸಗುತ್ತಿದ್ದ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಎಸಗಿದ, ಅವರಿಗೆ ಲೈಂಗಿಕ ಕಿರುಕುಳ ನೀಡಿದ ಸುಮಾರು 59 ವೀಡಿಯೋಗಳು ಪ್ರೊಫೆಸರ್ ಬಳಿ ಇದ್ದವು. ಕೆಲ ದಿನಗಳ ಹಿಂದೆಯೇ ಆ ವೀಡಿಯೋಗಳು ವೈರಲ್ ಆಗಿದ್ದು, ಕೂಡಲೇ ರಜನೀಶ್ ಕುಮಾರ್ ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
72 ಗಂಟೆ ಪೊಲೀಸ್ ಕಾರ್ಯಾಚರಣೆ
ಮಕ್ಕಳ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ದುರುಳನನ್ನು ಉತ್ತರ ಪ್ರದೇಶದ ಪೊಲೀಸರು ಸುಮಾರು 72 ಗಂಟೆ ಸತತ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ನಿಮ್ಮನ್ನು ಫೇಲ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದ ಪ್ರೊಫೆಸರ್ ಈಗ ಜೈಲುಪಾಲಾಗಿದ್ದು, ಇವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಪೋಷಕರು ಆಗ್ರಹಿಸಿದ್ದಾರೆ