ಬೆಂಗಳೂರು: ಈಗಾಗಲೇ ರಾಜ್ಯದ ಜನತೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಬಸ್ ಆಯ್ತು, ಮೆಟ್ರೋ ಆಯ್ತು, ಹಾಲಿನ ದರದಲ್ಲೂ ಕೂಡ ಏರಿಕೆ ಮಾಡಲಾಗಿದೆ. ಇವುಗಳ ಬೆನ್ನಲ್ಲೇ ಇದೀಗ ತೆಂಗಿನ ಕಾಯಿ ಬೆಲೆ ಕೂಡ ಏರಿಕೆಯಾಗಿದೆ.
ಹೌದು! ಈ ಬಾರಿ ಬೇಸಿಗೆಯಲ್ಲಿ ಕರ್ನಾಟಕದ ಎಳನೀರಿಗೆ ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ 1 ಕೆ.ಜಿ ತೆಂಗಿನಕಾಯಿಯ ಬೆಲೆ 60 ರಿಂದ 85 ರೂ. ಆಗಿದೆ.
ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ತೆಂಗಿನಕಾಯಿಗೆ ತುಂಬಾ ಬೇಡಿಗೆ ಬಂದಿದೆ. ದುಬಾರಿ ತೆಂಗಿನಕಾಯಿಯ ಬೆಲೆ ಇನ್ನೂ 15 ದಿನಗಳ ಕಾಲ ಹೀಗೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾದರೆ, ಸಿಲಿಕಾನ್ ಸಿಟಿ ಮಂದಿಗೆ ಅಡುಗೆ ಮಾಡೋದು ಹೇಗಪ್ಪಾ ಅನ್ನೋ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯವಾಗಿ ಅಡಿಗೆಗೆ ಉಪ್ಪು ಹೇಗೆ ಮುಖ್ಯವೋ ಅದೇ ರೀತಿ ತೆಂಗಿನ ಕಾಯಿ ಕೂಡ ಅಷ್ಟೇ ಮುಖ್ಯ. ಹೀಗಾಗಿ ಸಿಟಿ ಮಂದಿ ಅಡುಗೆ ಮಾಡುವುದು ಹೇಗಪ್ಪ ಅಂತ ತಲೆ ಕೆಡಿಸಿಕೊಂಡಿದ್ದಾರೆ.