ಉಡುಪಿ : ಉಡುಪಿ ಜಿಲ್ಲೆಯಲ್ಲಿ ತೆಂಗು ಬೆಳೆಗೆ ನಾನಾ ರೋಗಗಳು ಕಾಣಿಸಿಕೊಂಡು ಇಳುವರಿ ಕುಂಠಿತಗೊಂಡಿದ್ದು, ಬೆಳೆಗಾರರನ್ನು ಕಂಗಾಲಾಗಿಸಿದೆ. ಎಳನೀರು, ಕಾಯಿ, ಕೊಬ್ಬರಿ ಬೆಲೆ ಗಗನಮುಖಿಯಾಗಿರುವ ಸಂದರ್ಭದಲ್ಲೇ ಈ ರೋಗಬಾಧೆ ಕಾಣಿಸಿಕೊಂಡಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಜಿಲ್ಲೆಯಲ್ಲಿ ಸರಿಸುಮಾರು 16000 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಎಳನೀರು, ಕೊಬ್ಬರಿಗೆ ಬಂಪರ್ ಬೆಲೆ ಬಂದಿದೆ. ಕೆಜಿ ತೆಂಗಿನ ಕಾಯಿಗೆ 60 ರಿಂದ 70 ರೂ. ಇದ್ದರೆ, ಎಳನೀರು ಒಂದಕ್ಕೆ 60 ರಿಂದ 65 ರೂ.ಗೆ ಹೆಚ್ಚಳ ಕಂಡಿದೆ. ಇಂತಹ ಸಂದರ್ಭದಲ್ಲಿ ತೆಂಗಿನ ಮರಗಳಲ್ಲಿ ರೋಗ ಕಾಣಿಸಿಕೊಂಡು ಇಳುವರಿ ಕುಸಿದಿದೆ.

ಇದರಿಂದ ತೆಂಗು ಬೆಳೆಗಾರರು ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುತ್ತಿದ್ದಾರೆ. ಜೊತೆಗೆ ನಮಗಾದ ನಷ್ಟ ಪರಿಹಾರವನ್ನು ಒದಗಿಸಿ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರೈತರಾದ ದಿನಕರ್ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತೆಂಗು ಬೆಳೆಗಾರರು ಭಾರೀ ಸಂಕಷ್ಟಕೊಳಗಾಗಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ತೆಂಗಿನ ಮರಕ್ಕೆ ಫಂಗಸ್ ರೀತಿಯಲ್ಲಿ ಒಂದು ಮರದಿಂದ ಮತ್ತೊಂದು ಮರಕ್ಕೆ ರೋಗ ಹರಡುತ್ತಿದೆ. ಈ ರೀತಿಯ ರೋಗಗಳು ಬಯಲು ಸೀಮೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಇದೀಗ ಕರಾವಳಿಯಲ್ಲಿ ಕಂಡು ಬರುತ್ತಿದೆ. ಈ ಭಾಗದಲ್ಲಿ ಹೆಚ್ಚು ಲಾಭದಾಯಕ ಬೆಳೆಯೆಂದರೆ ಅಡಿಕೆ, ತೆಂಗು ಇದೀಗ ಸರಿಯಾದ ಸಮಯದಲ್ಲಿ ದಕ್ಕುತ್ತಿಲ್ಲ ಎಂಬುದೇ ನಮಗೆ ಕೊರಗಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಿದ ಡಿಜಿಪಿ | ಪರಪ್ಪನ ಅಗ್ರಹಾರ ಜೈಲಲ್ಲಿ ಅಲೋಕ್ ಕುಮಾರ್ ಸ್ಟ್ರಿಕ್ಟ್ ಆಕ್ಷನ್



















