ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಅಂಜಲಿ ಅಂಬಿಗೇರ ಎಂಬ ಯುವತಿಯ ಕುಟುಂಬಕ್ಕೆ ಸಿಎಂ ಸಹಾಯ ಮಾಡಿದ್ದಾರೆ.
ಅಂಜಲಿ ಮನೆಗೆ ನುಗ್ಗಿದ್ದ ಯುವಕ ಹತ್ಯೆ ಮಾಡಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಈಗ ಸಿಎಂ ಸಿದ್ದರಾಮಯ್ಯ ಅವರು ಅಂಜಲಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.
ಈ ಘಟನೆ ಮೇ 15 ರಂದು ನಡೆದಿತ್ತು. ವೀರಾಪುರ ಓಣಿಯ ನಿವಾಸಿ ಅಂಜಲಿ ಎಂಬ ಯುವತಿಯನ್ನು ವಿಶ್ವ ಅಲಿಯಾಸ ಗಿರೀಶ್ ಎಂಬ ಯುವಕ ಬೆಳ್ಳಂ ಬೆಳಗ್ಗೆ ಮನೆಗೆ ನುಗ್ಗಿ ಕೊಲೆ ಮಾಡಿದ್ದ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರೀತಿ ನಿರಾಕರಿಸಿದಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.
ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆಯಾದ ಒಂದೇ ತಿಂಗಳಲ್ಲಿ ಅಂಜಲಿ ಕೊಲೆಯಾಗಿತ್ತು. ಇವೆರೆಡು ಘಟನೆ ಹುಬ್ಬಳ್ಳಿಯಲ್ಲಿ ಭಯದ ವಾತಾವರಣ ಮೂಡಿಸಿದ್ದವು. ಕುಟುಂಬಕ್ಕೆ ಆಸರೆಯಾಗಿದ್ದ ಅಂಜಲಿ ಕೊಲೆಯಾಗಿದ್ದಕ್ಕೆ ಕುಟುಂಬಸ್ಥರು ದುಃಖಿತರಾಗಿದ್ದರು. ಹೀಗಾಗಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ನೇತೃದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ತಹಶೀಲ್ದಾರ್ ಕಲ್ಲಗೌಡ ಪಾಟೀಲ್ ಅವರು ಅಂಜಲಿ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ನೀಡಿದ್ದಾರೆ.