ಬೆಂಗಳೂರು: ಸಿಎಂ ಸಿದ್ದರಾಮಯ್ಯ(CM Siddaramaiah) ಅವರು ಇಂದಿನ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಏಕಾಏಕಿ ರದ್ದು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಸಿಎಂ ಅವರ ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ(Manipal Hospital) ತಪಾಸಣೆಗೆ ಒಳಗಾಗಿದ್ದಾರೆ.
ತಪಾಸಣೆ ನಡೆಸಿದ ವೈದ್ಯರು ಈ ಹಿಂದೆ ಲೆಗಮೆಂಟ್ ಶಸ್ತ್ರಚಿಕಿತ್ಸೆ (Ligament surgery) ನಡೆದ ಜಾಗದ ಮೇಲೆ ಒತ್ತಡ ಬಿದ್ದಿರುವುದರಿಂದ ನೋವು ಕಾಣಿಸಿಕೊಂಡಿದೆ. ಇನ್ನುಳಿದಂತೆ ಯಾವುದೇ ಸಮಸ್ಯೆ ಇಲ್ಲ. ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಎರಡು ದಿನ ಪ್ರಯಾಣ ಮಾಡದೆ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ವಿಶ್ರಾಂತಿಯಲ್ಲಿದ್ದಾರೆ.