ಬೆಂಗಳೂರು : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯಕ್ಕೆ ಟ್ವಿಸ್ಟ್ ಸಿಕ್ಕಿದೆ. ಎಸ್‌ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ್ ಗೆ ಟಿಕೆಟ್ ನೀಡಿದ್ದಕ್ಕಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಾದಿಕ್ ಪೈಲ್ವಾನ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಅವರನ್ನು ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಖಾನ್ ಅವರು ಕರೆದುಕೊಂಡು ಬಂದಿದ್ದಾರೆ.
ಗುರುವಾರ ದಾವಣಗೆರೆಗೆ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಖಾನ್ ಅವರು ಭೇಟಿ ನೀಡಿದ್ದರು. ಪೈಲ್ವಾನ್ ಅವರನ್ನು ಮನವೋಲಿಸುವ ಪ್ರಯತ್ನ ನಡೆಸಿದ್ದರು. ಆದರೆ, ಅವರು ನಾಮಪತ್ರ ವಾಪಸ್ ಪಡೆದುಕೊಂಡಿರಲಿಲ್ಲ. ಅಷ್ಟೇ ಅಲ್ಲದೆ, ಪೈಲ್ವಾನ್ ಬೆಂಬಲಿಗರು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪೈಲ್ವಾನ್ ಜೊತೆಗಿನ ಮಾತುಕತೆಯೂ ಫಲಪ್ರದವಾಗಿರಲಿಲ್ಲ.

ಈ ನಡುವೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಪೈಲ್ವಾನ್ ಹಾಗೂ ಬೆಂಬಲಿಗರು ಆಗಮಿಸಿದ್ದಾರೆ. ರಿಜ್ವಾನ್ ಮತ್ತು ಸಲೀಂ ಅವರು ಇವರನ್ನು ಕರೆತಂದಿದ್ದಾರೆ. ಈ ಸಂದರ್ಭದಲ್ಲಿ ಸಾದಿಕ್ ಪೈಲ್ವಾನ್ ಅವರ ಜೊತೆಗೆ ಸಿಎಂ ಕೆಲಕಾಲ ಮಾತುಕತೆ ನಡೆಸಿದರು. ಏನೇ ಸಮಸ್ಯೆ ಇದ್ದರೂ ಬಗೆಹರಿಸೋಣ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಜೊತೆಗಿನ ಸಾದಿಕ್ ಪೈಲ್ವಾನ್ ಮಾತುಕತೆ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಮಾತಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಾದಿಕ್ ಅವರನ್ನು ಸಮಾಧಾನ ಪಡಿಸಿದ ಸಿದ್ದರಾಮಯ್ಯ ಅವರು, ಉಪ ಚುನಾವಣೆ ಗೆಲುವು ಮುಖ್ಯವಾಗಿದೆ. ಎರಡು ಕ್ಷೇತ್ರದಲ್ಲಿ ನಾವು ಗೆಲ್ಲಲೇ ಬೇಕು. ಬಂಡಾಯದಿಂದ ವಿನಾ ಕಾರಣ ಸಮಸ್ಯೆ ಸೃಷ್ಟಿಯಾಗಲಿದೆ. ಹಾಗಾಗಿ ಮುನಿಸು ಮರೆತು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ‘ನಾನೇ ಪರಶಿವ, ನೀನೇ ನನ್ನ ಪಾರ್ವತಿ’ ಎಂದು ನಂಬಿಸಿ ಅತ್ಯಾಚಾರ – ನಕಲಿ ದೇವಮಾನವನ ವಿರುದ್ಧ FIR



















