ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಸಿಎಂ ಅವರ ನೂತನ ಕಚೇರಿಯ ವಿಡಿಯೋ ಹಾಕಿ ಟ್ವೀಟ್ ಮಾಡಿ ಸಮಾಜವಾದಿ ಮುಖವಾಡದ “ಮಜಾವಾದಿ ಸಿದ್ದರಾಮಯ್ಯ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಭ್ರಷ್ಟಾಚಾರದಲ್ಲಿ “ಸಿದ್ಧ” ಹಸ್ತರಾದ ಸಿದ್ದರಾಮಯ್ಯ, ಅಹಿಂದ ವೇಷತೊಟ್ಟು ರಾಜ್ಯದ ಜನರಿಗೆ ವಂಚಿಸುತ್ತಲೇ ಇದ್ದಾರೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು “ಕೈಲಾಗದ” ಸಿಎಂ ಸಿದ್ದರಾಮಯ್ಯ , ವಿಧಾನಸೌಧದಲ್ಲಿರುವ ಅವರ 323ನೇ ಕೊಠಡಿ ನವೀಕರಣಕ್ಕೆ ಕೋಟಿ ಕೋಟಿ ದುಂದು ವೆಚ್ಚ ಮಾಡಿದ್ದಾರೆ. ಸರಳತೆ, ಸಮಾಜವಾದ ಎನ್ನುತ್ತಲೇ ಐಷಾರಾಮಿ ಜೀವನ ನಡೆಸುವುದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕರಗತವಾಗಿದೆ.
2.5 ಕೋಟಿಗೂ ಹೆಚ್ಚು ದುಂದುವೆಚ್ಚ ಮಾಡಿ ಮುಖ್ಯಮಂತ್ರಿ ಕಚೇರಿಯನ್ನು ಕಾರ್ಪೊರೇಟ್ ಶೈಲಿಯಲ್ಲಿ ನವೀಕರಿಸಿ, ಕಾರ್ಪೊರೇಟ್ ಸಿಎಂ ಆಗಿ ಬದಲಾಗಿದ್ದಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.