ಬೆಂಗಳೂರು : ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಓಟರ್ಸ್ ಅಧಿಕಾರ್ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾಥ್ ನೀಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸುಮಾರು 11 ಶಾಸಕರು ಹಾಗೂ ಕೆಲವು ಪದಾಧಿಕಾರಿಗಳು ಈಗಾಗಲೇ ಬಿಹಾರಕ್ಕೆ ತೆರಳಿದ್ದು, ಇಂದು ಯಾತ್ರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸೋಮವಾರ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ.
ಗೌರಿ-ಗಣೇಶ ಹಬ್ಬದ ಅನಂತರ, ಆ. 29ರಂದು ಸಿಎಂ ಸಿದ್ದರಾಮಯ್ಯ ಅವರೂ ಬಿಹಾರಕ್ಕೆ ತೆರಳಲಿದ್ದು, ಓಟರ್ಸ್ ಅಧಿಕಾರ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದ ಕೆಲವು ಸಚಿವರು ಹಾಗೂ ಶಾಸಕರೂ ಕೂಡ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಒಬಿಸಿ ಆಯೋಗದ ಅಧ್ಯಕ್ಷರನ್ನಾಗಿಯೂ ಮಾಡಿದೆ. ಒಬಿಸಿ ಪ್ರಭಾವಿ ವರ್ಚಸ್ಸಾಗಿ ಕಾಣಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬಿಹಾರದಲ್ಲಿ ಚುನಾವಣೆಗೆ ಬಳಸಿಕೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.


















