ಬೆಂಗಳೂರು: ತೀವ್ರ ಮಂಡಿನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿದಿನ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಿಎಂ ವ್ಹೀಲ್ ಚೇರ್ ನಲ್ಲಿ ಆಗಮಿಸಿದ್ದರು. ಇಂತಹ ತೊಂದರೆ ತಪ್ಪಿಸುವ ದಿಸೆಯಲ್ಲಿ ಸಿದ್ದರಾಮಯ್ಯ ಅವರು ಸುಮಾರು 1.2 ಕೋಟಿ ರೂ. ಮೌಲ್ಯದ ಕಾರು ಖರೀದಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಓಡಾಡಲು ಅನುಕೂಲವಾಗುವ, ಐಷಾರಾಮಿ ಸೌಕರ್ಯಗಳು ಇರುವ, ಕಾರಿನಲ್ಲಿ ಹೆಚ್ಚು ಸ್ಪೇಸ್ ಇರುವ ಟೊಯೋಟಾ ವೆಲ್ ಫೈರ್ ಕಾರನ್ನು ಖರೀದಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಕ್ಯಾರವಾನ್ ರೀತಿ ಇರುವ ಕಾರಿನಲ್ಲಿ ಸೀಟುಗಳನ್ನು ಬೇಕಾದ ರೀತಿಯಲ್ಲಿ ಹೊಂದಿಸಲು ರಿಮೋಟ್ ಕಂಟ್ರೋಲ್ ಸಿಸ್ಟಮ್ ಇದೆ. ಇದರ ಬೆಲೆ 1.2 ಕೋಟಿ ರೂ.ನಿಂದ 1.3 ಕೋಟಿ ರೂ. ಎಂದು ತಿಳಿದುಬಂದಿದೆ.
ಕಾರು ಖರೀದಿಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಟೊಯೋಟಾ ವೆಲ್ ಫೈರ್ ಕಾರು ಟೆಸ್ಟ್ ಡ್ರೈವ್ ಪಡೆದಿದ್ದಾರೆ. ಇದೇ ಕಾರಿನಲ್ಲಿ ವಿಧಾನಸ ಸೌಧಕ್ಕೆ ಆಗಮಿಸಿದ್ದಾರೆ. ಈಗ ಸಿದ್ದರಾಮಯ್ಯ ಅವರಿಗೆ ಕಾರು ಇಷ್ಟವಾಗಿದ್ದು, ಇದನ್ನೇ ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಮಂಡಿನೋವಿನ ಹಿನ್ನೆಲೆಯಲ್ಲಿ ಈಗಿರುವ ಕಾರಿನಲ್ಲಿ ಅವರಿಗೆ ಓಡಾಡಲು ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.
ಟೊಯೋಟಾ ವೆಲ್ ಫೈರ್ ಕಾರು 2,487 ಸಿಸಿ ಎಂಜಿನ್ ಹೊಂದಿದ್ದು, ಒಂದು ಲೀಟರ್ ಪೆಟ್ರೋಲ್ ಗೆ 16 ಕಿಲೋಮೀಟರ್ ಮೈಲೇಜ್ ನೀಡಲಿದೆ. 148 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಇದಕ್ಕೆ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ದೇಶದಲ್ಲಿ ಸೆಲೆಬ್ರಿಟಿಗಳು ಹೆಚ್ಚಾಗಿ ಇದನ್ನು ಬಳಸುತ್ತಾರೆ.