ಬೆಂಗಳೂರು : ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಅವರ ನಿರ್ಧಾರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಖಂಡಿಸಿದ್ದಾರೆ.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ. ಬಿಜೆಪಿ ಅವರದ್ದು ಅಸ್ಥಿರಗೊಳಿಸುವ ಕ್ರಮ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವುದು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಟ್ಟ ಪಿತೂರಿ ಅಲ್ಲದೇ, ಬೇರೆ ಏನೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ರಾಜೀನಾಮೆಗೆ ಒತ್ತಾಯಿಸಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ನಮ್ಮ ಯಶಸ್ಸನ್ನು ಬಿಜೆಪಿ ಸಹಿಸುವುದಿಲ್ಲ. ರಾಜ್ಯ ಕಾಂಗ್ರೆಸ್ ಸಾಮಾನ್ಯ ಜನರಿಗೆ ಪ್ರಯೋಜನವಾಗುವ ಸರ್ಕಾರ ಮತ್ತು ಖಾತರಿ ಯೋಜನೆಗಳನ್ನು ನೀಡುತ್ತಿದೆ. ಈ ರಾಜಕೀಯ ದುರುದ್ದೇಶದ ವಿರುದ್ಧ ನಾವು ಬಲವಾಗಿ ಮತ್ತು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ರಾಜ್ಯಪಾಲರ ನಿರ್ಧಾರವು ಅಸಂವಿಧಾನಿಕವಾಗಿದೆ. ಈ ಕಾನೂನುಬಾಹಿರ ಅನುಮತಿಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ನನ್ನ ವಿರುದ್ಧ ದೂರು ದಾಖಲಾದ ದಿನದಿಂದಲೇ ಶೋಕಾಸ್ ನೋಟಿಸ್ ನೀಡಲಾಗಿದೆ. ರಾಜ್ಯಪಾಲರ ಈ ನಡೆಯನ್ನು ಮೊದಲೇ ನಿರೀಕ್ಷಿಸಲಾಗಿತ್ತು ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.