ಒಂದೆಡೆ ರಾಜಕೀಯ ಕಚ್ಚಾಟ, ಸಿಎಂ ಕುರ್ಚಿಯ ಮೇಲೆ ಸ್ವ ಪಕ್ಷದವರ ಕಣ್ಣು, ಇನ್ನೊಂದೆಡೆ ಮುಡಾ ಆರೋಪ. ಇವುಗಳ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಶಾಲೆಗೆ ತೆರಳಿ ಮಕ್ಕಳಿಗೆ ವ್ಯಾಕರಣದ ಪಾಠ ಮಾಡಿದ್ದಾರೆ.
ಮಕ್ಕಳಿಗೆ ಹಲವು ವಿಷಯಗಳ ಕುರಿತು ಪಾಠ ಮಾಡಿ ಕಾಲ ಕಳೆದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ವಿದ್ಯಾರ್ಥಿಗಳಿಗೆ ಪಾಠ ಮಾಡುವುದರೊಂದಿಗೆ ಸಮಸ್ಯೆಗಳನ್ನೂ ಆಲಿಸಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದರು. ಸಂಧಿಗಳ ಕುರಿತು ವಿದ್ಯಾರ್ಥಿಗಳನ್ನು ಪ್ರಶ್ನಿಸಿ, ಕೊನೆಗೆ ತಾವೇ ಉತ್ತರಿಸಿದ್ದಾರೆ.
ಸಂಧಿ ಎಂದರೇನು, ಸಂಧಿಗಳಲ್ಲಿ ಎಷ್ಟು ವಿಧಗಳಿವೆ? ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಸಿದ್ದರಾಮಯ್ಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಪ್ರವರ್ಗ, ಅಲ್ಪ ಪ್ರಾಣ-ಮಹಾ ಪ್ರಾಣದ ಕುರಿತು ಶಿಕ್ಷಕರಂತೆಯೇ ಸಿಎಂ ಸಿದ್ದಣ್ಣ ಪಾಠ ಮಾಡಿದ್ದಾರೆ. ಅಲ್ಲದೇ ಸ್ವರ-ದೀರ್ಘ ಸ್ವರದ ಕುರಿತು ಮಕ್ಕಳಿಗೆ ಸಿಎಂ ಪಾಠ ಮಾಡಿದ್ದು, ವ್ಯಂಜನಾಕ್ಷರ ಅಂದರೇನು, ವರ್ಗೀಯ-ಅವರ್ಗೀಯ ವ್ಯಂಜಗಳಿವೆ ಎಂದು ಕೇಳಿದ್ದಾರೆ.
ಮಕ್ಕಳಿಗೆ ಪ್ರಶ್ನೆ ಮಾಡಿ ಅವರಿಂದ ಉತ್ತರ ಪಡೆದು, ಶಿಕ್ಷಕರಂತೆಯೇ ತಿದ್ದಿ ತೀಡಿ ಮಕ್ಕಳಿಗೆ ಹೇಳಿದ್ದಾರೆ. ನಂತರ ಕರ್ನಾಟಕದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿಗಳು ನೀವೇ ಎಂದು ಉತ್ತರಿಸಿದರು. ನಂತರ ಸಿಎಂ 1994-95ರಲ್ಲಿ ಮೊರಾರ್ಜಿ ದೇಸಾಯಿ ಆರಂಭಿಸಿದ್ದರ ಕುರಿತು ಹೇಳಿದರು. ಮಕ್ಕಳು ಚಪ್ಪಾಳೆ ತಟ್ಟಿ ಸಿಎಂಗೆ ಧನ್ಯವಾದ ಅರ್ಪಿಸಿದರು.
ನಂತರ ಮಕ್ಕಳಿಗೆ ಬಸವಣ್ಣನವರ ಮಹತ್ವ ತಿಳಿಸಿದ್ದು, ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿದ್ದರು. ಬಸವಣ್ಣ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ್ದರು ಎಂದು ಪಾಠ ಮಾಡಿದರು. ಮಕ್ಕಳೊಂದಿಗೆ ಪೋಟೋ ತೆಗೆಸಿಕೊಂಡು ಅವರೊಂದಿಗೆ ಕುಳಿತು ಊಟ ಸವಿದರು. ಊಟ ಪ್ರತಿ ದಿನವೂ ಹೀಗೆಯೇ ಇರುತ್ತದಾ ಎಂದು ಮಕ್ಕಳನ್ನು ಪ್ರಶ್ನಿಸಿದರು. ಮಕ್ಕಳೊಂದಿಗೆ ಸಿಎಂ ರಾಗಿ ಮುದ್ದೆ, ಅನ್ನ ಸಾಂಬರ್, ಹಪ್ಪಳ ಊಟ ಮೈಸೂರು ಪಾಕ್ ಸವಿದರು.