ಬೆಳಗಾವಿ : ಜಮ್ಮು ಕಾಶ್ಮೀರದ ಲ್ಲಿ ಪೂಂಛ್ ನಡೆದ ಅಪಘಾತದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಯೋಧರಿಗೆ ಸಿಎಂ ಸಿದ್ದರಾಮಯ್ಯ ಅಂತಿಮ ಗೌರವ ಸಲ್ಲಿಸಿದ್ದಾರೆ.
ಅಪಘಾತಕ್ಕೀಡಾಗಿ ಹುತಾತ್ಮರಾದ ಯೋಧರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ಗೌರವ ಸಲ್ಲಿಸಿದರು. ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಯೋಧರ ಆತ್ಮಕ್ಕೆ ಶಾಂತಿ ಕೋರಿದರು.
ಅಲ್ಲದೇ, ಯೋಧರ ಕುಟುಂಬದ ನೋವಿನಲ್ಲಿ ನಾನೂ ಭಾಗಿಯಾಗುತ್ತೇನೆ ಎಂದಿರುವ ಸಿಎಂ ಮೃತ ಯೋಧರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದಾರೆ.
ಯೋಧರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಎಚ್‌ಸಿ ಮಹದೇವಪ್ಪ ಸೇರಿದಂತೆ ಹಲವರು ಇದ್ದರು.
ಜಮ್ಮಿ ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೈನಿಕರಿದ್ದ ಬಸ್ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಐವರು ಸೈನಿಕರು ಹುತಾತ್ಮರಾಗಿದ್ದರು. ಈ ಪೈಕಿ ಕರ್ನಾಟಕದ ನಾಲ್ವರು ಹುತಾತ್ಮರಾಗಿದ್ದಾರೆ. ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ಬೆಳಗಾವಿಯ ದಯಾನಂದ ತಿರುಕಣ್ಣನವರ್, ಚಿಕ್ಕೋಡಿಯ ಧನರಾಜ್ ಸುಭಾಷ್, ಬಾಗಲಕೋಟೆಯ ಮಹೇಶ್ ನಾಗಪ್ಪ, ಕುಂದಾಪುರದ ಅನೂಪ್ ಪೂಜಾರಿ ಹುತಾತ್ಮರಾಗಿದ್ದಾರೆ.